

ದಾವಣಗೆರೆ : ಬಸವಾದಿ ಶರಣರ ವಚನಗಳ ಅಧ್ಯಯನ ಜತೆಗೆ ಅದರಂತೆ ನಡೆದರೆ ಮಾನವನ ಮನಸ್ಸನ್ನು ನಿಯಂತ್ರಿಸಲು ಸಾಧ್ಯ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ಶ್ರಾವಣ ಮಾಸದ ಪ್ರಯುಕ್ತ ನಗರದ ವಿರಕ್ತ ಮಠದಲ್ಲಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ‘ಕಲ್ಯಾಣದಿಂದ ಉಳವಿಯಡೆಗೆ’ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವನ ಮನಸ್ಸು ಬದುಕಿನ ಬಂಡಿಯ ಗಾಲಿಗಳಿದ್ದಂತೆ. ಮನಸ್ಸಿನ ಮೇಲೆ ನಿಯಂತ್ರಣ ಇಲ್ಲದ್ದರಿಂದ ಬದುಕೆಂಬ ಬಂಡಿಯು ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗುತ್ತಿದೆ. ಮನಸ್ಸನ್ನು ನಿಯಂತ್ರಿಸಲು ವಚನಗಳು ಬೇಕು ಎಂದು ತಿಳಿಸಿದರು. ಶರಣರ ವಚನಗಳು ಜೀವನದ ಸಮಸ್ಯೆಗಳನ್ನು ಸಮಚಿತ್ತದಿಂದ ಎದುರಿಸುವ, ನೋವು-ನಲಿವನ್ನು ಸಮದೃಷ್ಟಿಯಿಂದ ಕಾಣುವ ಕಲೆಯನ್ನು ಕಲಿಸುತ್ತವೆ. ವಚನಗಳಿಂದ ಮಾನಸಿಕ , ಸಾಮಾಜಿಕ , ಆಧ್ಯಾತ್ಮಿಕ ಆರೋಗ್ಯವನ್ನು ಸಾಧಿಸಿ ನೆಮ್ಮದಿ ಸಂತೃಪ್ತಿಯ ಜೀವನ ನಡೆಸಬಹುದಾಗಿದೆ. ಬದುಕು ಸುಗಮವಾಗಿ ಸಾಗಲು ಕಾಯಕ ಬೇಕು ಎಂದರು. ಮನುಷ್ಯನ ಬದುಕಿಗೆ ಒಂದು ದಿನ ಸಾವಿದೆ. ಬಸವಾದಿ ಶರಣರ ಜೀವನ ಚರಿತ್ರೆ ಯಾರು ಕೇಳುತ್ತಾರೋ ಅವರು ಸಾವನ್ನು ಗೆಲ್ಲುತ್ತಾರೆ. ಬಸವಾದಿ ಶರಣರು ಸಾವಿಲ್ಲದ ಜೀವಗಳು. ಅವರು ಸೂರ್ಯ ಚಂದ್ರರು ಇರುವವರೆಗೂ ಶಾಶ್ವತ ಚೇತನವಾಗಿದ್ದಾರೆ ಎಂದು ಹೇಳಿದರು. ಮೈಸೂರು ಬಸವ ಧ್ಯಾನ ಮಂದಿರದ ಬಸವ ಲಿಂಗಮೂರ್ತಿ ಸ್ವಾಮೀಜಿ ಪ್ರವಚನ ನೀಡಿದರು. ಚಿತ್ರದುರ್ಗ ವೀರಶೈವ ಸಮಾಜದ ಸಹ ಕಾರ್ಯದರ್ಶಿ ಜಿತೇಂದ್ರ ಹುಲಿಕುಂಟೆ, ಪಾಲಿಕೆ ಮಾಜಿ ಸದಸ್ಯೆ ಶೋಭಾ ಪಲ್ಲಾಗಟ್ಟೆ, ಚಿಗಟೇರಿ ಜಯದೇವ, ಚಿಂದೋಡಿ ವೀರಣ್ಣ, ಎಸ್.ಜಿ. ಸಂಗಪ್ಪ ಇತರರು ಇದ್ದರು.