ಮಕ್ಕಳಿಗೆ ಕಾಲ ಕಾಲಕ್ಕೆ ಹಾಕಿಸಿ ಲಸಿಕೆ

cg.jpg
Published on

ದಾವಣಗೆರೆ : ಮಕ್ಕಳಿಗೆ ಕಾಲಕಾಲಕ್ಕೆ ರೋಗನಿರೋಧಕ ಲಸಿಕೆ ಹಾಕಿಸಲಾಗಿದೆಯೇ ಎಂಬುದನ್ನು ತಾಯಂದಿರು ಖಾತರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆ ಡಿ.ಇ.ಐ.ಸಿ ಸಭಾಂಗಣದಲ್ಲಿ ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಹೆಪಟೈಟಿಸ್ ವೈರಸ್ ಹೆಚ್ಚು ಅಪಾಯಕಾರಿ. ಲಿವರ್‌ಗೆ ಸಂಬಂಧಿಸಿದಂತೆ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್ ತಂದೊಡ್ಡುತ್ತವೆ. ಮುಖ್ಯವಾಗಿ ನವಜಾತ ಶಿಶುವಿಗೆ ಹೆಪಟೈಟಿಸ್ ಬಿ ವೈರಾಣು ವಿರುದ್ಧ ಹೋರಾಡುವ ಲಸಿಕೆ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
 2010ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಹೆಪಟೈಟಿಸ್ ವೈರಾಣು ಮತ್ತು ಅದಕ್ಕೆ ಲಸಿಕೆ ಕಂಡು ಹಿಡಿದ ನೋಬೆಲ್ ಪ್ರಶಸ್ತಿ ವಿಜೇತ ಪ್ರೊ. ಬರೂಚ್ ಸಾಮ್ಯುಯಲ್ ಬ್ಲೂಮ್ಬರ್ಗ ಅವರ ಜನ್ಮದಿನವಾದ ಜುಲೈ 28ರಂದು ವಿಶ್ವ ಹೆಪಟೈಟಿಸ್ ದಿನ ಎಂದು ಆಚರಿಸಲು ಕರೆ ನೀಡಿದೆ ಎಂದು ತಿಳಿಸಿದರು.
 ದೀರ್ಘಕಾಲದ ಸೋಂಕುಗಳಿಗೆ ಶೇ. 90 ಪ್ರತಿಶತ ಚಿಕಿತ್ಸೆ ಪತ್ತೆ ಹಚ್ಚುವುದು ಹಾಗೂ ಸಿರೋಸಿಸ್ ಮತ್ತು ಕ್ಯಾನ್ಸರ್‌ನಿಂದ ಆಗುವ ಮರಣ ಶೇ.65 ಪ್ರತಿಶತ ಕಡಿಮೆ ಮಾಡುವುದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಬೇಕು ಎಂದರು.
 ಹೆಪಟೈಟಿಸ್ ವೈರಾಣು ಬಹಳ ದಿನಗಳ ನಂತರ ರೋಗದ ಲಕ್ಷಣ ತೋರ್ಪಡಿಸುತ್ತದೆ. ವಿಶ್ವದಾದ್ಯಂತ 1 ವರ್ಷದಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚು ಜನರು ಈ ವೈರಾಣುವಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಹೆಚ್ಚಿನ ಕ್ರಮ ಕೈಗೊಳ್ಳಬೇಕು ಮತ್ತು ಜನರಿಗೆ ವೈರಾಣು ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
 ಜಿಲ್ಲಾ ಆರೋಗ್ಯ ಮತ್ತು ಕು. ಕ. ಅಧಿಕಾರಿ ಡಾ. ನಾಗರಾಜ್ ಮಾತನಾಡಿ, ಹೆಪಟೈಟಿಸ್ ರೋಗ ಸಾಮಾನ್ಯವಾಗಿ ಜಾಂಡಿಸ್, ಕಾಮಾಲೆ ರೋಗ ಎಂದು ಕರೆಯುತ್ತಾರೆ. ಈ ಕಾಯಿಲೆ ಲಕ್ಷಣ, ಪರಿಣಾಮ, ಚಿಕಿತ್ಸೆ ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮೂಲ ಉದ್ದೇಶ ಎಂದರು.
 ಹೆಪಟೈಟಿಸ್ ಬಿ.ಸಿ ಹೆಚ್ಚು ಅಪಾಯಕಾರಿ ವೈರಾಣು. ಮೊದಲು ಇದಕ್ಕೆ ಚಿಕಿತ್ಸೆ ಪಡೆಯಲು  ಬೇರೆಡೆ ಹೋಗಬೇಕಾಗಿತ್ತು. ಈಗ ಇಲ್ಲಿಯೇ ಪೂರ್ಣ ಪ್ರಮಾಣದ ಚಿಕಿತ್ಸೆ ನೀಡಲಾಗುತ್ತಿದೆ. ಜನರು ನಿರ್ಲಕ್ಷೃ ಮಾಡದೇ ಪ್ರಾಥಮಿಕ ಹಂತದಲ್ಲಿಯೇ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
 ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುಭಾಷ್‌ಚಂದ್ರ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಮಲೇರಿಯಾಧಿಕಾರಿ ಡಾ.ನಟರಾಜ್. ತಾಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net