ಇಂದ್ರ ಧನುಷ್ ಅಭಿಯಾನಕ್ಕೆ ಕೈ ಜೋಡಿಸಲು ಮನವಿ

indra.jpg
Published on

ದಾವಣಗೆರೆ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು. ಜೀವನ ಇಂದ್ರ ಧನುಷ್‌ನಂತೆ ವರ್ಣಮಯವಾಗಲು ಇಂದ್ರ ಧನುಷ್ ಅಭಿಯಾನಕ್ಕೆ ಕೈ ಜೋಡಿಸಿ ಪ್ರಾಣ ಉಳಿಸುವ ಲಸಿಕೆಗಳನ್ನು ಎಲ್ಲ ಮಕ್ಕಳಿಗೆ ಕೊಡಿಸಬೇಕು ಎಂದು ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್.ಡಿ. ವೆಂಕಟೇಶ್ ಮನವಿ ಮಾಡಿದರು.
 ತಾಲೂಕಿನ ಆವರಗೊಳ್ಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಇಂದ್ರ ಧನುಷ್ ಅಭಿಯಾನ ಮತ್ತು ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಯಾವ ಕಾಯಿಲೆಗೆ ಯಾವ ಲಸಿಕೆ ನೀಡಲಾಯಿತು, ಮುಂದಿನ ಲಸಿಕಾಕರಣದ ದಿನ, ಸಣ್ಣಪುಟ್ಟ ತೊಂದರೆಯ ಲಕ್ಷಣಗಳು, ತಾಯಿ ಕಾರ್ಡ್ ಕಾಪಾಡುವುದು ಇತ್ಯಾದಿ ಮಾಹಿತಿಯನ್ನು ತಾಯಂದಿರು ತಿಳಿದಿರಬೇಕು ಎಂದರು.
 ಮಗು ಜನಿಸಿದ ಒಂದು ಗಂಟೆ ಒಳಗೆ ತಾಯಿಯ ಹಾಲನ್ನು ನೀಡುವುದು, ಆರು ತಿಂಗಳವರೆಗೆ ತಾಯಿ ಹಾಲನ್ನು ಮಾತ್ರ ನೀಡುವುದು, ಆರು ತಿಂಗಳ ನಂತರ ತಾಯಿ ಹಾಲಿನ ಜತೆಗೆ ಪೂರಕ ಆಹಾರವನ್ನು ನೀಡಬೇಕು ಎಂದು ಹೇಳಿದರು.
 ತಾಯಿಯ ಹಾಲು ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಅದರ ಸೇವನೆಯಿಂದ ಮಕ್ಕಳು ದೀರ್ಘ ಕಾಲದ ಸಾಂಕ್ರಾಮಿಕ ರೋಗಗಳಿಗೆ ಒಳಗಾಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಿಳಿಸಿದರು.
 ಡಾ. ನಿತೀಶ ಅವರೂ ಉಪಯುಕ್ತ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಇಮಾಂಬಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರು, ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗರ್ಭಿಣಿಯರು, ಗ್ರಾಮಸ್ಥರು ಭಾಗವಹಿಸಿದ್ದರು.
 ಸಾರ್ವತ್ರಿಕ ಲಸಿಕಾಕರಣದಲ್ಲಿ ಡಿಜಿಟಲ್ ಪ್ರಮಾಣ ಪತ್ರವನ್ನು ಮಗುವಿನ ತಾಯಿಗೆ ನೀಡುವುದರೊಂದಿಗೆ ಯು-ವಿನ್ ತಂತ್ರಾಂಶದ ಬಗ್ಗೆ ಮಾಹಿತಿ ಕೊಡಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಎಸ್. ರವಿಕುಮಾರ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net