ಮಾಹಿತಿಯುಕ್ತ ಗ್ರಂಥಗಳಿಂದ ಸಮಾಜಕ್ಕೆ ಉಪಕಾರ

dvg-upanyasa.jpg
Published on

ದಾವಣಗೆರೆ : ಸ್ಥಳೀಯವಾದ ದೇಶ ಕಾಲಗಳ ಮಾಹಿತಿಗಳನ್ನು ಗ್ರಂಥ ರೂಪದಲ್ಲಿ ಒದಗಿಸಿಕೊಡುವುದು ಸುಲಭ ಸಾಧ್ಯವಲ್ಲ. ಟಿ. ಗಿರಿಜಾ ಅವರು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಕುರಿತಾಗಿ ಈ ಮಹತ್ಕಾರ್ಯ ಮಾಡಿದ್ದಾರೆ. ಅವರ ಕೃತಿಗಳು ಎಲ್ಲರಿಗೂ ಆಕರ ಗ್ರಂಥಗಳಾಗಿವೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.  ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ, ಸಾಹಿತಿ ಟಿ. ಗಿರಿಜಾ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗಿರಿಜಾ ಅವರ ಸಾಹಿತ್ಯ ಸಾಧನೆ ಕುರಿತು ಮಾತನಾಡಿದರು.  ಕಾದಂಬರಿ, ಕಥೆ, ನಾಟಕ, ವೈಚಾರಿಕ ಲೇಖನ, ವಿಮರ್ಶೆಗಳಿಗೂ ಸಿದ್ಧಹಸ್ತರಾಗಿದ್ದ ಗಿರಿಜಾ ಅವರು ಮಾಹಿತಿಯುಕ್ತ ಗ್ರಂಥಗಳನ್ನು ಕೊಟ್ಟು ಸಮಾಜಕ್ಕೆ ಮಹದುಪಕಾರ ಮಾಡಿದ್ದಾರೆ ಎಂದು ತಿಳಿಸಿದರು.  ಕಾದಂಬರಿ, ಕಥೆ, ಕವನಗಳಲ್ಲಿ ಮಾನುಷ ಭಾವನೆಗಳ ಮೇಲಾಟ ಪ್ರಧಾನವಾಗಿದ್ದರೆ, ಇತಿಹಾಸ ಸಾಹಿತ್ಯವು ಸತ್ಯನಿಷ್ಠವಾಗಿರಬೇಕು. ಇತಿಹಾಸ ಸಾಹಿತ್ಯದಲ್ಲಿ ಸತ್ಯಕ್ಕೆ ಅಗ್ರ ಪೂಜೆ, ಸೌಂದರ್ಯಕ್ಕೆ ನಂತರದ ಅವಕಾಶ ಎಂಬ ಎಸ್.ಎಲ್. ಭೈರಪ್ಪ ಅವರ ಮಾತನ್ನು ಉದಾಹರಿಸಿದರು.  ಇಲ್ಲಿ ಭಾಷಾ ಪ್ರೌಢಿಮೆ, ಅಲಂಕಾರಕ್ಕಿಂತ ವಸ್ತುನಿಷ್ಠ ಮಾಹಿತಿ ಮುಖ್ಯವಾಗಿರುತ್ತದೆ. ದೈನಂದಿನ ಬದುಕು, ವ್ಯವಹಾರಗಳಿಗೆ ಬೇಕಾದ ಮಾಹಿತಿ ಒದಗಿಸುವ ಸಾಹಿತ್ಯವೂ ಅವಶ್ಯಕ. ಮಾಹಿತಿ ಇಲ್ಲದಿದ್ದರೆ ಮನುಷ್ಯ ಅಸಹಾಯಕನಾಗುತ್ತಾನೆ ಎಂಬ ಹಾ.ಮಾ. ನಾಯಕರ ಅಭಿಪ್ರಾಯವನ್ನೂ ಉಲ್ಲೇಖಿಸಿದರು.  ಸಾಹಿತ್ಯ, ಸಂಗೀತ, ಕಲೆ, ನೃತ್ಯ, ನಾಟಕಗಳು ಸುಸಂಸ್ಕೃತ ಸಮಾಜದ ಸಾಕ್ಷಿ ಪ್ರಜ್ಞೆಗಳಂತಿದ್ದು ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಸ್ಥಳ ಇತಿಹಾಸ ಹಾಗೂ ದೇಶ ಕಾಲಗಳ ಮಾಹಿತಿಯೂ ಒಂದು ಪ್ರಕಾರವಾಗಿದೆ ಎಂದು ತಿಳಿಸಿದರು.  ದತ್ತಿನಿಧಿ ಸ್ಥಾಪಕಿ, ಬರಹಗಾರ್ತಿ ಟಿ.ಎಸ್. ಶೈಲಜಾ ಮಾತನಾಡಿ, ಟಿ. ಗಿರಿಜಾ ಅವರ ‘ದಾವಣಗೆರೆ ಇದು ನಮ್ಮ ಜಿಲ್ಲೆ’ ಗ್ರಂಥಕ್ಕಿರುವ ಬೇಡಿಕೆ ಹಾಗೂ ಮೌಲ್ಯವನ್ನು ಗಮನಿಸಿ ಅದನ್ನು ತಾವು ಪರಿಷ್ಕರಿಸಿ ಮತ್ತಷ್ಟು ಪೂರಕ ಮಾಹಿತಿಗಳೊಂದಿಗೆ ಪ್ರಕಟಿಸಿದ್ದಾಗಿ ಹೇಳಿದರು.  ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗರಾಜ ಮಾತನಾಡಿ, ಟಿ. ಗಿರಿಜಾ ಅವರ ಆಸಕ್ತಿ, ಅಧ್ಯಯನ, ಅವಿರತ ಪರಿಶ್ರಮಗಳಿಂದ ಹೊರಬಂದ ಅವರ 30ಕ್ಕೂ ಹೆಚ್ಚು ಕೃತಿಗಳು ಅವರ ಉದರದಿಂದ ಜನಿಸಿದ ಅಮೂಲ್ಯ ಶಿಶು ರತ್ನಗಳಂತೆ ಎಂದು ವರ್ಣಿಸಿದರು.  ಪ್ರಾಚಾರ್ಯ ಪ್ರೊ. ಕೆ.ಎಂ. ರುದ್ರಪ್ಪ ಮಾತನಾಡಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಜೆ.ಪಿ. ಗುರುರಾಜ, ಕಚೇರಿ ಅಧೀಕ್ಷಕಿ ಪ್ರತಿಭಾ, ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ವೆಂಕಟೇಶ ಬಾಬು ಇದ್ದರು.  ಕೀರ್ತನಾ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಎಸ್.ಆರ್. ಆಂಜನಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅತಿಥಿಗಳ ಪರಿಚಯವನ್ನು ಅಂಬಿಕಾ, ಅನುಶ್ರೀ, ವೈಷ್ಣವಿ ಮಾಡಿದರು. ಸಚಿನ್ ಕೊಗನೂರು ವಂದಿಸಿದರು. ವಿದ್ಯಾರ್ಥಿ ಸೈಯದ್ ಅಲಿ ನಿರೂಪಿಸಿದರು. ಕಿರಣ್ ಮತ್ತು ತಂಡದವರು ನಾಡಗೀತೆ, ವೈಷ್ಣವಿ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.  ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net