

ದಾವಣಗೆರೆ : ಮಾನವ ಜನ್ಮವು ಶ್ರೇಷ್ಠವಾಗಿದ್ದು, ಅದನ್ನು ಹಾಳು ಮಾಡಿಕೊಳ್ಳದೇ ಧರ್ಮ ಕಾರ್ಯಗಳ ಮೂಲಕ ಸಾರ್ಥಕ ಗೊಳಿಸಿಕೊಳ್ಳಲು ಸಾಧ್ಯ ಎಂದು ಅಫಜಲಪುರ ಮಠದ ವಿಶ್ವಕರ್ಮ ಜಗದ್ಗುರು ಶ್ರೀ ಪ್ರಣವ ನಿರಂಜನ ಸ್ವಾಮೀಜಿ ಹೇಳಿದರು. ವಿಶ್ವಕರ್ಮ ಸಮಾಜ ಸಂಘದಿಂದ ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ 42ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತಿನಲ್ಲಿ ನಮ್ಮ ದೇಹ ಶಾಶ್ವತವಲ್ಲ, ಹಣ ಮತ್ತು ಯೌವ್ವನವೂ ಶಾಶ್ವತವಲ್ಲ. ಆದರೆ ನಾವು ಮಾಡುವಂತಹ ಪುಣ್ಯ ಕಾರ್ಯಗಳು ಮಾತ್ರ ಎಂದೆಂದಿಗೂ ಉಳಿಯುತ್ತವೆ ಎಂದು ಶಾಸ್ತ್ರಗಳು ಸಾರಿ ಹೇಳುತ್ತವೆ. ಆದ್ದರಿಂದ ನಾವೆಲ್ಲರೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮನೆಯಲ್ಲಿ ಕಸ ತುಂಬಿದಾಗ ಗುಡಿಸಿ ಸ್ವಚ್ಛಗೊಳಿಸುತ್ತೇವೆ, ಬಟ್ಟೆ ಕೊಳೆಯಾದರೆ ತೊಳೆದು ಶುದ್ಧ ಮಾಡುತ್ತೇವೆ. ಅದೇ ರೀತಿ ನಮ್ಮ ಮನಸ್ಸು ಕಲ್ಮಶಗಳಿಂದ ತುಂಬಿದ್ದರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಮನಸ್ಸು ಶುದ್ಧವಾಗುವುದಲ್ಲದೇ, ಶಾಂತಿಯನ್ನು ಅನುಭವಿಸುತ್ತದೆ ಮತ್ತು ಜ್ಞಾನವನ್ನು ಪಡೆಯುತ್ತದೆ ಎಂದು ತಿಳಿಸಿದರು. ವಿಶ್ವಕರ್ಮ ಸಮಾಜ ಸಂಘವು, ಜನರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಮನಗಂಡು, ಉಚಿತ ಸಾಮೂಹಿಕ ವಿವಾಹ ಮತ್ತು ಉಪನಯನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು. ಜವಳಿ ವರ್ತಕ ಬಿ.ಸಿ. ಉಮಾಪತಿ ಮಾತನಾಡಿ, ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜವು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಈ ಹಿಂದೆ ಇದೇ ಸ್ಥಳದಲ್ಲಿ ಚಿಕ್ಕದಾಗಿದ್ದ ದೇವಾಲಯವನ್ನು ಸುಂದರವಾಗಿ ಅಭಿವೃದ್ಧಿಪಡಿಸಿರುವುದು ಸಮಾಜದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಸಮಾಜವು ನಮ್ಮೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ ಮತ್ತು ಮುಂದೆಯೂ ಸಮಾಜದ ಅಭಿವೃದ್ಧಿಗೆ ತಮ್ಮ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದರು. ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ. ಮುರುಗೇಶ್ ಮಾತನಾಡಿ, ವಿಶ್ವಕರ್ಮ ಸಮಾಜದ ಶ್ರೇಷ್ಠ ಕಾರ್ಯಗಳನ್ನು ಪುರಾಣಗಳ ಕಾಲದಿಂದಲೂ ಉಲ್ಲೇಖಿಸಲಾಗಿದೆ. ತ್ರೇತಾಯುಗ ಮತ್ತು ದ್ವಾಪರ ಯುಗಗಳಲ್ಲಿ ಮಾತ್ರವಲ್ಲದೆ, ಕಲಿಯುಗದಲ್ಲೂ ವಿಶ್ವಕರ್ಮ ಸಮಾಜದ ಕೆಲಸಗಳ ಮಹತ್ವವನ್ನು ತಿಳಿಸಲಾಗಿದೆ ಎಂದು ಹೇಳಿದರು. ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಆರ್. ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಸಾಪುರದ ಬಿ. ನಾಗೇಂದ್ರಚಾರ್, ಎನ್. ಪೂರ್ವಚಾರ್, ಬಿ.ಪಿ. ಜಗನ್ನಾಥ್, ಬಿ.ಪಿ. ರಮೇಶಚಾರ್ ಇತರರು ಇದ್ದರು. ಸಿ.ಪಿ. ಪೂರ್ವಚಾರ್ ನಿರೂಪಿಸಿದರು. ಕೊಟ್ರೇಶಚಾರ್ ಸ್ವಾಗತಿಸಿದರು. ಬಿ.ವಿ ರಾಜಶೇಖರ್ ವಂದಿಸಿದರು.