ದೇಶದ ಟಾಪ್ ಟೆನ್ ವಿಶ್ವವಿದ್ಯಾಲಯದ ಗುರಿ ಇರಲಿ

conference.jpg
Published on

ದಾವಣಗೆರೆ : ದೇಶದಲ್ಲಿ 10ನೇ ಸ್ಥಾನದೊಳಗೆ ಬರುವ ವಿಶ್ವವಿದ್ಯಾಲಯಗಳಿಗೆ 1 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ಆ ಮಟ್ಟಕ್ಕೇರಲು ವಿಶ್ವವಿದ್ಯಾಲಯಗಳು ಪ್ರಯತ್ನಿಸಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್. ಸುಭಾಸ್ ಸಲಹೆ ನೀಡಿದರು.
 ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬುಧವಾರ, ‘ಆತ್ಮನಿರ್ಭರ ಭಾರತ್ ಹಾಗೂ ಭಾರತದಲ್ಲಿ ನಿರ್ವಹಣಾ ಶಿಕ್ಷಣ ಹೊಸ ದಿಕ್ಕು ಮತ್ತು ದೃಷ್ಟಿಕೋನ’ ವಿಷಯ ಕುರಿತಾದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
 ಖಾಸಗಿ ವಿಶ್ವವಿದ್ಯಾಲಯಗಳು ಲಕ್ಷಾಂತರ ರೂ. ಹಣ ಪಡೆದು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿವೆ. ಜತೆಗೆ ತಜ್ಞರಿಂದ ಉಪನ್ಯಾಸ ಕೊಡಿಸಲಾಗುತ್ತದೆ. ಆದ್ದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಟ್ಟವೂ ಹೆಚ್ಚಿದೆ. ಅದೇ ರೀತಿ ಸರ್ಕಾರಿ ವಿಶ್ವವಿದ್ಯಾಲಯಗಳು ವಿದೇಶದಿಂದ ವಿಷಯ ತಜ್ಞರು ಮತ್ತು ಉಪನ್ಯಾಸಕರನ್ನು ಆಹ್ವಾನಿಸಿ ಬೋಧನೆ ಮಾಡಿಸಿ, ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.
 ಆಡಳಿತ ನಿರ್ವಹಣಾ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ಬಳಸಿಕೊಂಡು ಬೋಧನೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
 ಕೃತಕ ಬುದ್ಧಿಮತ್ತೆ ಈಗಾಗಲೇ ಮೈಕ್ರೋಸಾಫ್ಟ್‌ನಲ್ಲಿ ಬಳಕೆಯಾಗುತ್ತಿದ್ದು, ಸಂಶೋಧನೆ, ಸಾಹಿತ್ಯ ಮುಂತಾದ ವಿಷಯಗಳಲ್ಲೂ ಉಪಯೋಗಿಸಬೇಕು. ಆನ್‌ಲೈನ್ ಕೋರ್ಸ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
 ಈಗ ನಮ್ಮ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಒಂದು ಬೈಕ್ ಅಥವಾ ಕಾರು ಖರೀದಿಸಲು ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ ಇತ್ತು. ಆದರೆ, ಜಾಗತೀಕರಣದ ನಂತರ ಕಾಯುವ ಪ್ರಮೇಯವೇ ಇಲ್ಲ. ಆತ್ಮನಿರ್ಭರ ಯೋಜನೆಯಿಂದ ದೇಶ ಮತ್ತಷ್ಟು ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.
 ಉದ್ಯಮಿ ಅಥಣಿ ಎಸ್. ವೀರಣ್ಣ ಮಾತನಾಡಿ, ಮನಮೋಹನ ಸಿಂಗ್ ಜಾರಿಗೆ ತಂದ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳಿಂದಾಗಿ ಭಾರತ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಕೃಷಿಯ ಜತೆಗೆ ಕೈಗಾರಿಕೆಗಳು ಬೆಳವಣಿಗೆಯಾಗದಿದ್ದರೆ ದೇಶದ ಪ್ರಗತಿ ಸಾಧ್ಯವಿಲ್ಲ. ಆತ್ಮನಿರ್ಭರ ಭಾರತ ಜಾರಿಯಾದಾಗಿನಿಂದ ಸ್ವಾವಲಂಬಿ, ಸ್ವಯಂ ಪರಿಪೂರ್ಣ ದೇಶವಾಗಿ ಹೊರಹೊಮ್ಮುತ್ತಿದೆ ಎಂದರು.
 ಜವಾಹರ ಲಾಲ್ ನೆಹರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೈಗಾರಿಕೆಗೆ ಒತ್ತು ನೀಡಿದರು. ನಮ್ಮ ದೇಶದಲ್ಲಿಯೇ ಉತ್ಪಾದನೆಯಾಗಬೇಕು, ಅದರಿಂದ ದೇಶವು ಆರ್ಥಿಕವಾಗಿ ಸದೃಢಗೊಳ್ಳುತ್ತದೆ ಎಂದು ಹೇಳಿದ್ದಾಗಿ ಸ್ಮರಿಸಿದರು.
 ದೇಶವು ಕೈಗಾರಿಕೆಗಳಲ್ಲಿ ಮೂರನೇ ಸ್ಥಾನ ಪಡೆದಿದ್ದು, ಆರ್ಥಿಕವಾಗಿಯೂ ಬಲಿಷ್ಠಗೊಳ್ಳುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಪರಿವರ್ತನೆಗೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
 ಉತ್ತಮ ಶಿಕ್ಷಣದಿಂದ ಮಾತ್ರ ಪ್ರತಿಯೊಂದು ಸವಾಲನ್ನು ಎದುರಿಸಲು ಸಾಧ್ಯವಾಗಲಿದೆ. ಆದ್ದರಿಂದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಬೇಕಿರುವ ಉಪನ್ಯಾಸ, ಕಾರ್ಯಾಗಾರಗಳನ್ನು ಹಮ್ಮಿಕೊಂಡು ಭವಿಷ್ಯದ ಪ್ರಜೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
 ಪರೀಕ್ಷಾಂಗ ಕುಲಸಚಿವ ಡಾ. ಕೆ. ಶಿವಶಂಕರ್, ಡಾ.ಜೆ.ಕೆ. ರಾಜು, ಪ್ರೊ. ಕೆ.ಬಿ. ರಾಮಪ್ಪ, ಡಾ. ಬಿ.ಪಿ. ಸುರೇಶ್, ಡೀನ್ ಡಾ. ಪಿ. ಲಕ್ಷ್ಮಣ,  ಸಮ್ಮೇಳನದ ಸಂಯೋಜಕ ಡಾ. ಶಶಿಧರ್ ಇದ್ದರು. ಸಮ್ಮೇಳನದ ಸಹ ಸಂಯೋಜಕ ರಮೇಶ್ ಚಂದ್ರಹಾಸ್ ಸ್ವಾಗತಿಸಿದರು.
 ...
 (ಕೋಟ್)
 ವಿಶ್ವವಿದ್ಯಾಲಯಗಳು ಜಾಗತಿಕ ಸ್ಪರ್ಧೆಗೆ ತಲುಪಬೇಕು. ಸಹಭಾಗಿತ್ವ ಹೊಂದುವ ನಿಟ್ಟನಲ್ಲಿ ವಿದೇಶಗಳಿಂದ ಬೋಧಕರು ಹಾಗೂ ವಿದ್ಯಾರ್ಥಿಗಳನ್ನು ಆರ್ಕಷಿಸುವಂತಾಗಬೇಕು. ವಿವಿಗಳು ಉನ್ನತ ಶ್ರೇಯಾಂಕ ಪಡೆದುಕೊಳ್ಳುವುದು ಅಗತ್ಯವಾಗಿದ್ದು, ಇದಕ್ಕಾಗಿ ಕೇವಲ ಪಾಠ ಬೋಧನೆಗಷ್ಟೇ ಅಲ್ಲದೆ, ಸಂಶೋಧನೆ ಹಿನ್ನೆಲೆಯ ಉಪನ್ಯಾಸಕರ ಅಗತ್ಯವಿದೆ. ಕೆಲ ವಿಶ್ವವಿದ್ಯಾಲಯಗಳು ಕೇವಲ ಅಧ್ಯಯನ ಹಾಗೂ ಸಂಶೋಧನೆಗಾಗಿಯೇ ಉಪನ್ಯಾಸಕರನ್ನು ನೇಮಿಸಿಕೊಳ್ಳುತ್ತಿವೆ.
  ಡಾ. ಬಿ.ಡಿ. ಕುಂಬಾರ, ದಾವಣಗೆರೆ ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net