

ದಾವಣಗೆರೆ: ವಿದ್ಯಾರ್ಥಿಗಳು ಸಾಹಿತ್ಯ ಓದುವ ಅಭ್ಯಾಸ ರೂಢಿಸಿಕೊಳ್ಳುವುದು ಅವಶ್ಯಕ ಎಂದು ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ ರಾಮೇನಹಳ್ಳಿ ಜಗನ್ನಾಥ ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ವಿದ್ಯಾರ್ಥಿ ಕೂಟದಿಂದ ಬುಧವಾರ ಹಮ್ಮಿಕೊಂಡಿದ್ದ ಶಿವಗಂಗೋತ್ರಿ ವಾರ್ಷಿಕೋತ್ಸವ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯವು ನಮ್ಮೊಳಗಿನ ಆತ್ಮಶಕ್ತಿ ಜಾಗೃತಗೊಳಿಸುತ್ತದೆ, ಸದಾ ಕಾಲ ನಮ್ಮ ಕನಸನ್ನು ನೆನಪಿಸುತ್ತದೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಕೈಗೊಳ್ಳಲು ಸಾಹಿತ್ಯ ಪೂರಕವಾಗಲಿದೆ ಎಂದು ಹೇಳಿದರು.
ಕನಸು ಕಾಣುವುದು ತಪ್ಪಲ್ಲ. ಆದರೆ, ಕಂಡ ಕನಸು ನನಸಾಗಿಸುವುದು ಮುಖ್ಯ. ಇದಕ್ಕಾಗಿ ಎದುರಾಗುವ ಪ್ರತಿ ಸವಾಲನ್ನು ಆತ್ಮವಿಶ್ವಾಸದಿಂದ ಹಿಮ್ಮೆಟ್ಟಿಸಿದಾಗ ಗುರಿ ಸ್ಪಷ್ಟವಾಗುತ್ತದೆ. ಕ್ಷೇತ್ರ ಯಾವುದೇ ಆಗಿದ್ದರೂ ಅದರಲ್ಲಿ ಸಂಪೂರ್ಣ ತೊಡಗಿಸಿಕೊಂಡು ಮುನ್ನಡೆಯುವ ಛಲಗಾರಿಕೆ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದರು.
ಪಿಯುಸಿ ವಿಜ್ಞಾನ ವಿಷಯ ಕಲಿಕೆಗೆ ಹೋದಾಗ ಇಂಗ್ಲೀಷ್ ಬಾರದೆ ಅವಮಾನಿತನಾಗಿದ್ದೆ. ಅದನ್ನೇ ಸವಾಲಾಗಿ ಸ್ವೀಕರಿಸಿ ಇಂಜಿನಿಯರಿಂಗ್ ಸೀಟ್ ಪಡೆದೆ. ಕಲೆ, ಸಾಹಿತ್ಯದ ಅಭಿರುಚಿ ಮೂಲಕ ನಿರ್ದೇಶನಕ್ಕೆ ಕೈಹಾಕಿದೆ. ಚಲನಚಿತ್ರ ನಿರ್ಮಿಸಿ ಕನಸನ್ನು ನನಸಾಗಿಸಿದ ತೃಪ್ತಿ ಇದೆ ಎಂದು ತಿಳಿಸಿದರು.
ಅಥ್ಲೀಟ್ ಹಾಗೂ ಪಿಕ್ಸೆಲ್ ಪ್ರೈಮ್ ಇನ್ ಕಾರ್ಪೊರೇಷನ್ ಸಂಸ್ಥೆಯ ಸಿಇಒ ಪ್ರೇಮಚಂದು ಚಿರುವೊಲು ಮಾತನಾಡಿ, ಫಲಿತಾಂಶದ ಬಗ್ಗೆ ಯೋಚನೆ ಬಿಟ್ಟು ಹೆಜ್ಜೆ ಇಟ್ಟಾಗ ಸೋತರೂ ಅನುಭವದ ಗಟ್ಟಿ ವಿಶ್ವಾಸ ಸಾಧನೆಯ ಹಾದಿ ಸುಲಭಗೊಳಿಸುತ್ತದೆ. ಕನಸಿನ ಗುರಿ ಮುಟ್ಟಲು ಆತ್ಮವಿಶ್ವಾಸ ಸಾಕು. ಹಣ, ಪ್ರಶಸ್ತಿ, ಪದವಿ ಯಾವುದೂ ಮುಖ್ಯವಾಗುವುದಿಲ್ಲ ಎಂದರು.
ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಜತೆಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಲು ಸ್ನಾತಕೋತ್ತರ ವಿದ್ಯಾರ್ಥಿಕೂಟ ಸಹಕಾರಿಯಾಗಲಿದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಕೂಟವು ಒಳಗೊಂಡಿದೆ ಎಂದು ತಿಳಿಸಿದರು.
ಪರೀಕ್ಷಾಂಗ ಕುಲಸಚಿವ ಡಾ.ಕೆ. ಶಿವಶಂಕರ, ಶಿಕ್ಷಣ ನಿಕಾಯದ ಡೀನ್ ಡಾ. ವೆಂಕಟೇಶ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಯು.ಎಸ್. ಮಹಾಬಲೇಶ್ವರ, ವಿದ್ಯಾರ್ಥಿಕೂಟದ ಪ್ರಧಾನ ಕಾರ್ಯದರ್ಶಿ ಕೆ.ಆರ್. ಜೀವಿಕಾ ಇದ್ದರು.
ವಿದ್ಯಾರ್ಥಿಕೂಟದ ಉಪಾಧ್ಯಕ್ಷ ಡಾ.ಅಶೋಕಕುಮಾರ ಪಾಳೇದ ಸ್ವಾಗತಿಸಿದರು. ಉಪಾಧ್ಯಕ್ಷೆ ಡಾ.ಶಾರದಾದೇವಿ ಕಳ್ಳಿಮನಿ ವಂದಿಸಿದರು. ಡಾ.ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.