

ದಾವಣಗೆರೆ : ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಇತ್ತೀಚೆಗೆ, ಜಿಎಂಯು ಸ್ಕೂಲ್ ಆಫ್ ಡಿಜಿಟಲ್ ಟೆಕ್ನಿಕಲ್ ಕಾಂಪಿಟೆನ್ಸಿ ಡೆವಲಪ್‌ಮೆಂಟ್ ವಿಭಾಗದಿಂದ ಸಿದ್ಧಪಡಿಸಲಾಗಿರುವ ಜಿಎಂಯು ಇ- ಕಲಿಕಾ ಡಿಜಿಟಲ್ ವೇದಿಕೆಯನ್ನು ವಿವಿ ಕುಲಾಧಿಪತಿ ಜಿ.ಎಂ. ಲಿಂಗರಾಜು ಉದ್ಘಾಟಿಸಿದರು. ಈ ವೇಳೆ ಅವರು ಮಾತನಾಡಿ, ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಅವರ ಚಿಂತನೆ ಮತ್ತು ಮಾರ್ಗದರ್ಶನದಡಿ ಈ ಡಿಜಿಟಲ್ ಶಿಕ್ಷಣದ ಹೊಸ ಪ್ರಯತ್ನವನ್ನು ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಬಹಳ ಅನುಕೂಲವಾಗಲಿದ್ದು, ಉತ್ತಮ ಶೈಕ್ಷಣಿಕ ಬಾಂಧವ್ಯ ಬೆಸೆಯಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿವಿಧ ಕೋರ್ಸ್‌ಗಳ ಬಗ್ಗೆ ಅಕ್ಷರ ಜ್ಞಾನವನ್ನು ಪಡೆಯಬಹುದು. ಅಧ್ಯಾಪಕರು ತಮ್ಮಲ್ಲಿರುವ ಅಕ್ಷರ ಜ್ಞಾನದ ಕೌಶಲವನ್ನು ನೀಡಬಹುದು. ಉದ್ಯಮಿಗಳು ಸಹ ಹೊಸ ಆವಿಷ್ಕಾರ, ತಮ್ಮ ಕ್ಷೇತ್ರದ ಕಲಿಕಾ ವಿಷಯಗಳನ್ನು ಪ್ರಸ್ತುತಪಡಿಸಲು ಇದು ಸೂಕ್ತ ವೇದಿಕೆಯಾಗಿದೆ ಎಂದರು. ಜಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕ್‌ಪಾಲ್ ಮಾತನಾಡಿ, ಒಂದೇ ವೇದಿಕೆಯಡಿ ಈ ಕಲಿಕಾ ವೇದಿಕೆ ಮೂಲಕ ಸಾಕಷ್ಟು ಜ್ಞಾನವನ್ನು ಪಡೆಯಬಹುದಾಗಿದೆ. ಬರುವ ಸೆಮಿಸ್ಟರ್‌ನಿಂದ ಈ ಕಲಿಕಾ ಡಿಜಿಟಲ್ ವೇದಿಕೆಯ ಅವಕಾಶ ಸಿಗಲಿದೆ ಎಂದು ತಿಳಿಸಿದರು. ಜಿಎಂಯು ಕುಲಸಚಿವ ಡಾ. ಸುನಿಲ್ ಕುಮಾರ್ ಬಿ.ಎಸ್, ವಿವಿಧ ವಿಭಾಗಗಳ ನಿರ್ದೇಶಕರು, ಡೀನ್‌ಗಳು, ಅಧ್ಯಾಪಕರು ಇದ್ದರು. ಸ್ಕೂಲ್ ಆಫ್ ಡಿಜಿಟಲ್ ಟೆಕ್ನಿಕಲ್ ಕಾಂಪಿಟೆನ್ಸಿ ಡೆವಲಪ್‌ಮೆಂಟ್ ವಿಭಾಗದ ಸಹಾಯಕ ನಿರ್ದೇಶಕ ಫಿರೋಜ್ ಖಾನ್ ನಿರೂಪಿಸಿದರು. ಮತ್ತೊಬ್ಬ ಸಹಾಯಕ ನಿರ್ದೇಶಕ ರವಿತೇಜ ಬಾಳೆಕಾಯಿ ಸ್ವಾಗತಿಸಿದರು. ನಿರ್ದೇಶಕ ಕೀರ್ತಿ ಪ್ರಸಾದ್ ಜಿ. ವಂದಿಸಿದರು.