ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ

dvg-university_20241218004323289.jpg
Published on

ದಾವಣಗೆರೆ : ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.  ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ, ಯುನಿಸೆಫ್, ಮೈಸೂರು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಪರ್ತಕರ್ತರಿಗಾಗಿ ಆಯೋಜಿಸಿದ್ದ ‘ಮಕ್ಕಳ ಹಕ್ಕುಗಳು, ಆರೋಗ್ಯ ಹಾಗೂ ರಕ್ಷಣೆ’ ಕುರಿತಾದ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.  ಪ್ರಸ್ತುತ ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದು ಅಪೌಷ್ಟಿಕತೆ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಆರೋಗ್ಯ ವಿಚಾರಕ್ಕೆ ಒತ್ತು ನೀಡಬೇಕಾದ ಅನಿವಾರ್ಯತೆಯಿದೆ. ಮಕ್ಕಳ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.  ಮಕ್ಕಳ ಹಕ್ಕುಗಳನ್ನು ಕಾಪಾಡಲು ಮಾಧ್ಯಮಗಳು ಕೈಜೋಡಿಸಬೇಕು. ಹಿಂದೆಲ್ಲ ಮಕ್ಕಳಿಗಾಗಿ ಪತ್ರಿಕೆಗಳಲ್ಲಿ ವಿಶೇಷ ಪುಟಗಳು ಬರುತ್ತಿದ್ದವು. ಈಗ ಮಕ್ಕಳ ಮೇಲಾಗುವ ದೌರ್ಜನ್ಯದ ಸುದ್ದಿಗಳೇ ಜಾಸ್ತಿಯಾಗಿವೆ ಎಂದು ಅಭಿಪ್ರಾಯಪಟ್ಟರು.  ಲಿಂಗ ಸಮಾನತೆ ಕಾಯ್ದುಕೊಳ್ಳಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆದಿವೆ. ಆದರೆ ನಮ್ಮ ದೇಶದಲ್ಲಿ ಗಂಡು ಸಂತಾನದ ವ್ಯಾಮೋಹದಿಂದ ಮತ್ತು ಹೆಣ್ಣು ಮಗು ಕುಟುಂಬಕ್ಕೆ ಭೂಷಣವಲ್ಲ ಎಂಬ ಮೂಢ ನಂಬಿಕೆಯಿಂದ ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಾಗಿ ನಡೆಯುತ್ತಿವೆ. ಇದರಿಂದಾಗಿ ಲಿಂಗ ಅಸಮಾನತೆ ಉಂಟಾಗಿದೆ. ಭ್ರೂಣ ಹತ್ಯೆ, ಬಾಲ್ಯ ವಿವಾಹ, ಬಾಲಕಾರ್ಮಿಕತೆ ಹಾಗೂ ಲಿಂಗ ತಾರತಮ್ಯ ತೊಲಗಿಸಲು ಜನರಿಗೆ ಮಾಧ್ಯಮಗಳು ಅರಿವು ಮೂಡಿಸಬೇಕು ಎಂದು ಹೇಳಿದರು.  ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷೆ ಸ್ವಪ್ನಾ ನಾಯ್ಕ ಮಾತನಾಡಿ, ಕರೊನಾ ನಂತರದ ದಿನಗಳಲ್ಲಿ ಮಕ್ಕಳನ್ನು ನಿರ್ಲಕ್ಷ್ಯವಾಗಿ ಕಾಣಲಾಗುತ್ತಿದೆ ಎಂಬುದು ಯುನೆಸ್ಕೋ ವಾದವಾಗಿದೆ. ಮಕ್ಕಳೊಂದಿಗೆ ಒಡನಾಟ ಕಡಿಮೆಯಾಗುವುದರಿಂದ ಅವರಿಗೆ ಮಾನಸಿಕ ಖಿನ್ನತೆಗಳು ಆರಂಭವಾಗುತ್ತವೆ ಎಂದರು.  ಮಕ್ಕಳ ಮಾನಸಿಕ ಆರೋಗ್ಯದ ಅಧ್ಯಯನ ನಡೆಯಬೇಕಿದೆ. ಜತೆಗೆ ಮಕ್ಕಳು ಡಿಜಿಟಲ್ ಮಾಧ್ಯಮಗಳನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದು ಈ ವಿಚಾರದ ಬಗ್ಗೆಯೂ ಚರ್ಚೆ ಆಗಬೇಕಿದೆ. ಮಕ್ಕಳ ವಿಚಾರದಲ್ಲಿ ಪತ್ರಿಕೆಗಳಲ್ಲಿ ಸಂಪಾದಕೀಯ ಕೂಡ ಬರುತ್ತವೆ, ಆದರೆ ಅವರ ರಕ್ಷಣೆ ಮತ್ತು ಹಕ್ಕುಗಳ ಕುರಿತಾಗಿ ವರದಿ ಮಾಡುವವರು ಅದರ ಕುರಿತು ಹೆಚ್ಚಿನ ತಿಳಿವಳಿಕೆ ಹೊಂದುವುದು ಸೂಕ್ತ ಎಂದು ಹೇಳಿದರು.  ಯುನಿಸೆಫ್ ಹೈದರಾಬಾದ್‌ನ ಪ್ರೊ. ಸುನ್‌ಸೇನ್ ಮಾತನಾಡಿ, ಈಗಿನ ಮಕ್ಕಳು ಅತಿಹೆಚ್ಚು ಒತ್ತಡವನ್ನು ಹೊಂದುವ ಮೂಲಕ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳ ಆರೋಗ್ಯದ ಕಡೆ ಗಮನಹರಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳು ಸಹ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದರು.  ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ಪ್ರೊ.ಶಿವಕುಮಾರ ಕಣಸೋಗಿ ಮಾತನಾಡಿದರು. ಮಂಜುನಾಥ ಸುಬೇದಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net