

ದಾವಣಗೆರೆ : ಎಸ್‌ಎಸ್ ಕೇರ್ ಟ್ರಸ್ಟ್ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಕೆಲಸ ಮಾಡುವುದನ್ನು ಕಲಿಯಬೇಕು ಎಂದು ಸಂಸದೆ ಹಾಗೂ ಟ್ರಸ್ಟ್ನ ಆಜೀವ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ನಗರದ ಬಾಪೂಜಿ ಸಭಾಂಗಣದಲ್ಲಿ ಬುಧವಾರ, ಎಸ್‌ಎಸ್ ಕೇರ್ ಟ್ರಸ್ಟ್ನ ವಿದ್ಯಾರ್ಥಿ ವಿಭಾಗದ (2025-26ನೇ ಸಾಲು) ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್‌ಎಸ್ ಕೇರ್ ಟ್ರಸ್ಟ್ ಆರೋಗ್ಯ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ಜೀವನದಲ್ಲಿ ಆಶಾಕಿರಣವಾಗಿದೆ. ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದು ಟ್ರಸ್ಟ್ನ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷತೆಯಾಗಿದೆ. ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಕೌಶಲ ಹಾಗೂ ಸೇವಾಭಾವ ಬೆಳೆಸುವ ಪಾಠಶಾಲೆಯಾಗಿದೆ ಎಂದರು. ಕಳೆದ ಒಂದು ವರ್ಷದ ಅವಧಿಯಲ್ಲಿ ವಿದ್ಯಾರ್ಥಿ ವಿಭಾಗವು ಕೈಗೊಂಡಿದ್ದ ಕ್ಯಾನ್ಸರ್ ಕಾಳಜಿ, ಸಂಸಾಧನದಂತಹ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಜಲ ಉಳಿಸಿ ಜೀವ ಉಳಿಸಿ ಅಭಿಯಾನ, ಟ್ರೀ ಆಫ್ ಹೋಪ್ ಮೂಲಕ 200 ಗಿಡಗಳನ್ನು ನೆಡುವ ಕಾರ್ಯ, ರಕ್ತದಾನ ಶಿಬಿರ, ವಯನಾಡ್ ಭೂಕುಸಿತ ಪರಿಹಾರ ಕಾರ್ಯಗಳಲ್ಲಿ ಸಹಾಯ ಹಾಗೂ ಅಗತ್ಯ ಸಾಮಗ್ರಿಗಳನ್ನು ಕಳುಹಿಸಿದ್ದು ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿದ್ದಾರೆ ಎಂದು ಪ್ರಶಂಸಿಸಿದರು. ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಅಂಧರ ಶಾಲೆಗಳಿಗೆ ಭೇಟಿ ನೀಡಿ ನೆರವು ನೀಡಿದ ವಿದ್ಯಾರ್ಥಿಗಳ ಕಾರ್ಯವು ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರು. ಎಸ್‌ಎಸ್ ಕೇರ್ ಟ್ರಸ್ಟ್ನ ವಿದ್ಯಾರ್ಥಿ ವಿಭಾಗ ರೂಪಿಸಿದ ‘ಜ್ಞಾನದ ಗೋಡೆ’ ಪರಿಕಲ್ಪನೆಯನ್ನು ಎಲ್ಲ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮಹಾತ್ಮ ಗಾಂಧೀಜಿ ಅವರ ಮಾತುಗಳನ್ನು ಉಲ್ಲೇಖಿಸಿ, ಇತರರಿಗೆ ಸೇವೆ ಮಾಡುವುದರಲ್ಲೇ ನಮ್ಮ ಬದುಕಿನ ನಿಜವಾದ ಅರ್ಥ ಇದೆ. ಸೇವೆಯ ಮೂಲಕವೇ ನೀವು ನಿಮ್ಮನ್ನು ಕಂಡುಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ವಿದ್ಯಾರ್ಥಿ ವಿಭಾಗದ ಹೊಸ ತಂಡಕ್ಕೆ ಪ್ರಮಾಣವಚನ ಬೋಧಿಸಿದರು. ಎಸ್‌ಎಸ್ ಕೇರ್ ಟ್ರಸ್ಟ್ ಕೋರ್ ಕಮಿಟಿ ಸದಸ್ಯರಾದ ಡಾ.ಮೂಗನಗೌಡ, ಡಾ.ಜಿ.ಎಸ್. ಲತಾ, ಡಾ. ಶುಭಾ ದಾವಳಗಿ, ಡಾ. ಅನಿತಾ, ವಿದ್ಯಾರ್ಥಿ ಘಟಕದ ಓಂ ದುಬೆ, ಟಿ. ಪ್ರಿಯಾ ಹಾಗೂ ಬಾಪೂಜಿ ಸಂಸ್ಥೆಯ ಕಾಲೇಜುಗಳ ಪ್ರಾಚಾರ್ಯರು ಇದ್ದರು.