

ದಾವಣಗೆರೆ : ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ 5 ವರ್ಷಗಳ ಹಿಂದೆ ಆರಂಭವಾದ ಎಸ್‌ಎಸ್ ಕೇರ್ ಟ್ರಸ್ಟ್ ತನ್ನ ಚಟುವಟಿಕೆಗಳನ್ನು ಜಿಲ್ಲಾದ್ಯಂತ ವಿಸ್ತರಿಸಿದೆ. ಟ್ರಸ್ಟ್‌ನ ವಿದ್ಯಾರ್ಥಿ ಘಟಕದ ಆರಂಭದೊಂದಿಗೆ ಸಂಸ್ಥೆಗೆ ಮತ್ತೊಂದು ಆಯಾಮ ದೊರಕಿದಂತಾಗಿದೆ.
ಟ್ರಸ್ಟ್‌ನ ವಿದ್ಯಾರ್ಥಿ ಘಟಕದ ಉದ್ಘಾಟನೆ ನಗರದ ಬಾಪೂಜಿ ಸಭಾಂಗಣದಲ್ಲಿ ಗುರುವಾರ ನೆರವೇರಿತು. ಸಂಸ್ಥೆಯ ಲೈಫ್ ಟ್ರಸ್ಟಿಯೂ ಆಗಿರುವ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಎಸ್‌ಎಸ್ ಕೇರ್ ಟ್ರಸ್ಟ್‌ನಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತ ಬಂದಿದ್ದೇವೆ. 16 ಡಯಾಲಿಸಿಸ್ ಘಟಕಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ (ಇದುವರೆಗೆ 16 ಸಾವಿರ ಡಯಾಲಿಸಿಸ್ ಸೈಕಲ್‌ಗಳು). ಗ್ರಾಮೀಣ ಜನರಿಗೆ ವೈದ್ಯಕೀಯ ಸೇವೆಯನ್ನು ತಲುಪಿಸುವ ಬಸ್ ಸಂಚಾರ ಮಾಡುತ್ತಿದೆ. ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಶೈಲಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.
ಟ್ರಸ್ಟ್‌ನ ವಿದ್ಯಾರ್ಥಿ ಘಟಕದಿಂದ ಮುಂಬರುವ ದಿನಗಳಲ್ಲಿ ಬೀದಿ ನಾಟಕ, ಮೆಡಿಕಲ್ ಎಲೆಕ್ಟ್ರಾನಿಕ್ ಶಿಬಿರ, ವಾಕಥಾನ್, ಕ್ರೀಡಾ ಚಟುವಟಿಕೆ, ತಂಬಾಕಿನ ದುಷ್ಪರಿಣಾಮಗಳ ಕುರಿತು ಸಮುದಾಯ ಜಾಗೃತಿ ಮೂಡಿಸುವುದು ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಇದೊಂದು ಜವಾಬ್ದಾರಿಯ ಕೆಲಸವಾಗಿದೆ. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಮೂಲ ಟ್ರಸ್ಟ್‌ನ ಚಟುವಟಿಕೆಗಳನ್ನು ಗಮನಿಸಬೇಕು. ನಿಯಮಿತವಾಗಿ ಸಭೆಗಳನ್ನು ಹಮ್ಮಿಕೊಂಡು ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಇತರರಿಗೆ ಜಾಗೃತಿ ಮೂಡಿಸುವ ಜತೆಗೆ ನಿಮ್ಮ ಜೀವನ ಶೈಲಿಯನ್ನೂ ಸುಧಾರಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಜೆಜೆಎಂ ಕಾಲೇಜಿನ ಪ್ರೊಫೆಸರ್ ಡಾ. ಮೂಗನಗೌಡ ಪಾಟೀಲ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಓಂ ದುಬೆ ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಟ್ರಸ್ಟ್‌ನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಪ್ರಾಚಾರ್ಯೆ ಡಾ. ಶುಕ್ಲಾ ಶೆಟ್ಟಿ, ಪ್ರಾಧ್ಯಾಪಕರಾದ ಡಾ.ಜಿ.ಎಸ್. ಲತಾ, ಡಾ. ಶಾಂತಲಾ ಅರುಣ್ ಕುಮಾರ್, ಡಾ. ಶುಭಾ, ಡಾ. ಎಸ್. ಅಶ್ವಿನಿ ಇದ್ದರು. ಅನ್ನಪೂರ್ಣಾ ಪ್ರಾರ್ಥಿಸಿದರು. ಸ್ನೇಹಾ ಭರತನಾಟ್ಯ ಪ್ರಸ್ತುತಪಡಿಸಿದರು.