

ದಾವಣಗೆರೆ : ಗಿಡ ನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ಇದಕ್ಕಾಗಿ ಶಾಲಾ ಮಕ್ಕಳಿಗೆ ಪ್ರೇರಣೆ ನೀಡುವುದು ಅವಶ್ಯಕ ಎಂದು ಮಹಾನಗರ ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್ ಹೇಳಿದರು.
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ದಾವಣಗೆರೆ ದಕ್ಷಿಣ ವಲಯ, ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ರಾಜನಹಳ್ಳಿ ಸೀತಮ್ಮ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರೊನಾ ಸಂದರ್ಭದಲ್ಲಿ ಆಮ್ಲಜನಕದ ಅವಶ್ಯಕತೆ ಎಷ್ಟಿದೆ ಎಂಬುದನ್ನು ಎಲ್ಲರೂ ಮನಗಂಡಿದ್ದಾರೆ. ಗಿಡಗಳನ್ನು ನೆಡುವ ಜತೆಗೆ ಅವುಗಳನ್ನು ಬೆಳೆಸುವ ಕಾರ್ಯಕ್ರಮ ವ್ಯಾಪಕವಾಗಿ ನಡೆಯಬೇಕು. ಶಾಲೆಗಳಲ್ಲಿ ಮಕ್ಕಳ ತಂಡ ರಚಿಸಿ ಒಂದೊಂದು ಗಿಡ ಬೆಳೆಸುವ ಜವಾಬ್ಧಾರಿ ವಹಿಸಿ ಉತ್ತಮವಾಗಿ ಬೆಳೆಸಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಶಾಲೆಯ ಎಸ್‌ಡಿಎಂಸಿ ಉಪ ಗೌರವಾಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ, ಶಾಲಾ ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಬೇಕು. ಇದರಿಂದ ಪರಿಸರ ಜಾಗೃತಿ ಮೂಡುತ್ತದೆಯಲ್ಲದೆ ಎಲ್ಲೆಡೆ ಹಸಿರೀಕರಣ ಸಾಧ್ಯವಾಗಲಿದೆ. ಇದಕ್ಕಾಗಿ ಅರಣ್ಯ ಇಲಾಖೆಯ ಸಹಕಾರವೂ ದೊರೆಯಲಿದೆ ಎಂದು ಹೇಳಿದರು.
ಕನ್ನಡಪರ ಹೋರಾಟಗಾರ ಟಿ.ಶಿವಕುಮಾರ್ ಮಾತನಾಡಿ, ದೇಶದಲ್ಲಿ ಇಂದು ನಡೆಯುತ್ತಿರುವ ಎಲ್ಲ ಅವಘಡಗಳಿಗೂ ಪರಿಸರ ನಾಶವೇ ಕಾರಣ. ಪ್ರಕೃತಿ ವಿಕೋಪದಿಂದಾಗಿ ಒಂದೆಡೆ ಅಧಿಕ ಉಷ್ಣಾಂಶದಿಂದ ಜನತೆ ತತ್ತರಿಸುತ್ತಿದ್ದರೆ ಮತ್ತೊಂದೆಡೆ ತೀವ್ರ ಮಳೆಯಿಂದ ನಗರಗಳು ಮುಳುಗಡೆ ಆಗುತ್ತಿವೆ. ಮರಗಳನ್ನು ಕಡಿದು ದೇಶ ಬರಡು ಮಾಡಿದ್ದು ಅರಣ್ಯ ಬೆಳೆಸುವ ಮೂಲಕ ಪ್ರಕೃತಿ ಸಮತೋಲನ ಕಾಪಾಡಬೇಕಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಜ್ಯೋತಿ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗಿಡ ನೆಡಲು ಅರಣ್ಯ ಇಲಾಖೆಯು ಹೆಚ್ಚು ಉತ್ತೇಜನ ನೀಡುತ್ತಿದೆ. ಹೊಸ ಬಡಾವಣೆ ಹಾಗೂ ರಸ್ತೆಗಳ ಖಾಲಿ ಜಾಗಗಳಲ್ಲಿ ಗಿಡ ನೆಡುವಂತೆ ಇಲಾಖೆಗೆ ಮನವಿ ಸಲ್ಲಿಸಿದರೆ ಅಂತಹ ಪ್ರದೇಶದಲ್ಲಿ ಗಿಡ ನೆಡಲಾಗುವುದು ಎಂದು ಹೇಳಿದರು.
ಮಕ್ಕಳ ಸಾಹಿತ್ಯ ಪರಿಷತ್ ವಲಯಾಧ್ಯಕ್ಷ ಡಾ.ರವಿಕುಮಾರ್ ಮಾತನಾಡಿ ಮಕ್ಕಳ ಪ್ರತಿಭೆಗೆ ಸದಾ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡುವ ಕೆಲಸವನ್ನು ಪರಿಷತ್ ಮಾಡುತ್ತಿದೆ ಎಂದರು.
ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಉಪ ಪ್ರಾಚಾರ್ಯ ಎ.ಆರ್.ಮಂಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಬಿ.ಕುಬೇರಪ್ಪ, ಸದಸ್ಯ ವಸಂತ ಎಂ.ರಾಟಿ, ಅರಣ್ಯ ಇಲಾಖೆಯ ನಾಗರಾಜ್, ಮಾಜಿ ಸೈನಿಕ ಸುರೇಶ ರಾವ್ ಇದ್ದರು.