

ದಾವಣಗೆರೆ : ಧಾರವಾಡದಿಂದ ಬೆಂಗಳೂರಿಗೆ ಚಲಿಸುತ್ತಿದ್ದ ವಂದೇ ಭಾರತ್ ರೈಲಿನ ಚಕ್ರವೊಂದರಲ್ಲಿ ದಾವಣಗೆರೆ ರೈಲು ನಿಲ್ದಾಣದ ಬಳಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.
ಲೋಕೊ ಪೈಲಟ್ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ತಪ್ಪಿದೆ. ರೈಲಿನಲ್ಲಿ 502 ಪ್ರಯಾಣಿಕರಿದ್ದರು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಈ ರೈಲು ಸಂಚಾರವನ್ನು ರದ್ದುಪಡಿಸಿದ ರೈಲ್ವೆ ಇಲಾಖೆ, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿತು.
ಮಧ್ಯಾಹ್ನ 3.30ಕ್ಕೆ ಹರಿಹರ ಮತ್ತು ದಾವಣಗೆರೆ ನಡುವೆ ರೈಲು ಸಂಚರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಕ್ಷಣ ಜಾಗೃತರಾದ ರೈಲ್ವೆ ಸಿಬ್ಬಂದಿ, ಚಲಿಸುತ್ತಿದ್ದ ರೈಲು ನಿಲುಗಡೆ ಮಾಡಿ ಬೆಂಕಿ ಆರಿಸಿದ್ದಾರೆ. ಈ ರೈಲಿನಲ್ಲಿ 502 ಪ್ರಯಾಣಿಕರಿದ್ದರು.
ವಂದೇ ಭಾರತ್ ರೈಲಿನ ಸಿ-4 ಕೋಚ್‌ನ ಗಾಲಿಯೊಂದರ ಹಾಟ್ ಎಕ್ಸೆಲ್‌ನಿಂದ ಬೆಂಕಿ ಕಿಡಿ ಹೊತ್ತಿಕೊಂಡಿದೆ. ತಕ್ಷಣ ಆವರಿಸಿಕೊಂಡ ಹೊಗೆಯಿಂದ ಇಂಜಿನ್‌ಗೆ ಸಂದೇಶ ರವಾನೆಯಾಗಿದೆ. ಅಂದಾಜು 100 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ನಿಲುಗಡೆ ಮಾಡಿ ಬೆಂಕಿಯ ಕಿಡಿಯನ್ನು ನಂದಿಸಲಾಯಿತು. ತಾಂತ್ರಿಕ ತೊಂದರೆಯನ್ನು ಸರಿಪಡಿಸಿಕೊಂಡು ದಾವಣಗೆರೆ ನಿಲ್ದಾಣದವರೆಗೆ ರೈಲನ್ನು ತರಲಾಯಿತು ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ದಾವಣಗೆರೆ ರೈಲು ನಿಲ್ದಾಣಕ್ಕೆ ಬಂದಾಗಲೂ ಹೊಗೆ ಇನ್ನೂ ಇತ್ತು. ಸಿಬ್ಬಂದಿ ಅಗ್ನಿ ನಂದಕಗಳನ್ನು ಬಳಸಿ ಬೆಂಕಿ ನಂದಿಸಿದರು. ರೈಲು ಪರಿಶೀಲಿಸಿದ ತಾಂತ್ರಿಕ ತಂಡ ಸಂಚಾರವನ್ನು ರದ್ದುಪಡಿಸಿತು.
ನಂತರ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಜನಶತಾಬ್ದಿ ರೈಲಿನಲ್ಲಿ ಪ್ರಯಾಣಿಕರನ್ನು ಅರಸೀಕೆರೆ ವರೆಗೆ ಕಳಿಸಲಾಯಿತು. ಅಲ್ಲಿಂದ ಮತ್ತೊಂದು ವಂದೇ ಭಾರತ್ ರೈಲಿನ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಕಳಿಸಲಾಯಿತು. ನಂತರ ಖಾಲಿ ರೈಲನ್ನು ದುರಸ್ತಿಗಾಗಿ ಹರಿಹರಕ್ಕೆ ಕಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ರೈಲಿನ ಗಾಲಿಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಪ್ರಯಾಣಿಕರನ್ನು ಬೇರೆ ರೈಲಿನಲ್ಲಿ ಕಳಿಸಿಕೊಡಲಾಯಿತು’ ಎಂದು ದಾವಣಗೆರೆ ರೈಲು ನಿಲ್ದಾಣದ ಸ್ಟೇಷನ್ ಮ್ಯಾನೇಜರ್ ಕರಿಬಸಪ್ಪ ತಿಳಿಸಿದರು.