ರೈಲು ನಿಲ್ದಾಣದಲ್ಲಿ ಅಂಗವಿಕಲ ಪ್ರಯಾಣಿಕನ ರಕ್ಷಣೆ

dvg-train.jpg
Published on

ದಾವಣಗೆರೆ :  ನಗರದ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಚಲಿಸುವ ರೈಲಿನಿಂದ ಇಳಿಯಲು ಯತ್ನಿಸಿದ ಅಂಗವಿಕಲ ಪ್ರಯಾಣಿಕನನ್ನು ಕರ್ತವ್ಯ ನಿರತ ಆರ್‌ಪಿಎಫ್ ಹೆಡ್ ಕಾನ್‌ಸ್ಟೇಬಲ್ ಬಿ.ಎಸ್. ಸತೀಶ್ ರಕ್ಷಿಸಿದ್ದಾರೆ.  ವಿಜಯಪುರ ಜಿಲ್ಲೆ ಹಿಟ್ಟಿನಹಳ್ಳಿ ಗ್ರಾಮದ ಎಚ್.ಎನ್. ಪ್ರಶಾಂತ್ ಪ್ರಾಣಾಪಾಯದಿಂದ ಪಾರಾದವರು. ಪ್ರಶಾಂತ್, ಬಲಗಾಲಿನ ಅಳವಡಿಕೆಗೆ ಮಾಪನ ಮಾಡಿಸಿಕೊಳ್ಳಲು ಬೆಂಗಳೂರಿನ ಆಸ್ಪತ್ರೆಗೆ ಹೋಗುವ ಉದ್ದೇಶದಿಂದ ಹೊಸಪೇಟೆಯಿಂದ ಯಶವಂತಪುರಕ್ಕೆ ಹೋಗುವ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.  ಮಾರ್ಗ ಮಧ್ಯೆ ಭಾನುವಾರ ರಾತ್ರಿ ದಾವಣಗೆರೆ ರೈಲು ನಿಲ್ದಾಣ ತಲುಪಿದಾಗ, ಬೆಂಗಳೂರಿನ ವೈದ್ಯರು ಕಾರಣಾಂತರದಿಂದ ಲಭ್ಯವಿಲ್ಲ ಎಂಬ ಮಾಹಿತಿ ಅವರಿಗೆ ಲಭ್ಯವಾಯಿತು. ದಾವಣಗೆರೆಯಲ್ಲೇ ಇಳಿದು, ಸ್ವಲ್ಪ ಹೊತ್ತಿನಲ್ಲೇ ಬರಲಿದ್ದ ವಿಜಯಪುರದ ವಿಶೇಷ ರೈಲು ಹತ್ತಲು ನಿರ್ಧರಿಸಿದರು.  ಅಷ್ಟು ಹೊತ್ತಿಗಾಗಲೇ ದಾವಣಗೆರೆ ನಿಲ್ದಾಣದಿಂದ ರೈಲು ಚಲಿಸಲು ಆರಂಭಿಸಿತು. ಅವಸರದಲ್ಲಿ ರೈಲಿನಿಂದ ಇಳಿಯಲು ಯತ್ನಿಸಿದಾಗ ಆಯತಪ್ಪಿದೆ. ಅದೇ ಹೊತ್ತಿಗೆ ಸಮೀಪದಲ್ಲೇ ಕರ್ತವ್ಯನಿರತರಾಗಿದ್ದ ಆರ್‌ಪಿಎಫ್ ಹೆಡ್ ಕಾನ್‌ಸ್ಟೇಬಲ್ ಬಿ.ಎಸ್. ಸತೀಶ್, ಪ್ರಾಣದ ಹಂಗು ತೊರೆದು ಪ್ರಯಾಣಿಕನನ್ನು ರಕ್ಷಿಸಿದರು.  ಆಘಾತಕ್ಕೊಳಗಾಗಿದ್ದ ಪ್ರಶಾಂತ್ ಅವರನ್ನು ಸಂತೈಸಿ, ಆತ್ಮಸ್ಥೈರ್ಯ ತುಂಬಿ ಅವರ ಗ್ರಾಮಕ್ಕೆ ವಾಪಸಾಗಲು ನೆರವಾಗಿದ್ದಾರೆ. ಸಮಯ ಪ್ರಜ್ಞೆಯಿಂದ ಜೀವ ಕಾಪಾಡಿದ ಸತೀಶ್ ಅವರನ್ನು ರೈಲ್ವೆ ರಕ್ಷಣಾ ದಳದ ಇನ್‌ಸ್ಪೆಕ್ಟರ್ ಬಿ.ಕೆ.ಪ್ರಕಾಶ್, ಸಬ್ ಇನ್‌ಸ್ಪೆಕ್ಟರ್ ಎ.ಕೊಂಡರೆಡ್ಡಿ ಪ್ರಶಂಸಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net