ದಾವಣಗೆರೆಯಲ್ಲಿ ಸೆರೆ ಸಿಕ್ಕ ಹಂತಕ

acused.jpg
Published on

ದಾವಣಗೆರೆ : ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿಯನ್ನು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ ದಾವಣಗೆರೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
 ಆರೋಪಿಯು ಗುರುವಾರ ವಿಶ್ವ ಮಾನವ ಎಕ್ಸ್‌ಪ್ರೆಸ್ ರೈಲಿನಲ್ಲಿ ಲಕ್ಷ್ಮೀ ಎಂಬ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಆ ಮಹಿಳೆ ಕೈ ಅಡ್ಡ ಹಿಡಿದಿದ್ದರಿಂದ ಆಕೆಯ ಕೈಗೆ ತೀವ್ರ ಗಾಯಗಳಾಗಿದ್ದು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 ಹಂತಕ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ, ಮೈಸೂರಿನಿಂದ ದಾವಣಗೆರೆ ವರೆಗೆ ಮಾಡಿದ ರೈಲು ಪ್ರಯಾಣ ಹಲವು ಸಂಗತಿಗಳನ್ನು ಬಿಚ್ಚಿಡುತ್ತದೆ.
 ಆರೋಪಿಯು ಗುರುವಾರ ಬೆಳಗ್ಗೆ ಮೈಸೂರಿನಿಂದ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಆರಂಭಿಸಿದ. ತುಮಕೂರು ನಿಲ್ದಾಣದಲ್ಲಿ ಗದಗ ಜಿಲ್ಲೆ ಮುಳಗುಂದದ ಲಕ್ಷ್ಮೀ-ಮಹಾಂತೇಶ ಸವಟೂರು ದಂಪತಿ ಮತ್ತು ಅವರ ಪುತ್ರ ವಿಜಯ ಕುಮಾರ್ ಅದೇ ರೈಲು ಏರಿದರು.
 ಅರಸೀಕೆರೆ ನಿಲ್ದಾಣದಲ್ಲಿ ಆರೋಪಿ ವಿಶ್ವನಾಥ, ಲಕ್ಷ್ಮೀ ಅವರಿದ್ದ ಬೋಗಿಗೆ ಬಂದು ಪಕ್ಕದ ಸೀಟಿನಲ್ಲಿ ಕುಳಿತುಕೊಂಡ. ರೈಲು ಚಿಕ್ಕಜಾಜೂರು ನಿಲ್ದಾಣದಿಂದ ಹೊರಟ ನಂತರ ಲಕ್ಷ್ಮೀ ಅವರು ವಾಶ್ ರೂಮ್‌ಗೆ ತೆರಳಿದರು.
 ಅವರನ್ನು ಹಿಂಬಾಲಿಸಿದ ಹಂತಕ, ವಾಶ್ ರೂಮ್‌ನ ಬಾಗಿಲ ಕಿಂಡಿಯಿಂದ ಇಣುಕಿ ನೋಡಿದ್ದಾನೆ. ಕೂಡಲೇ ಹೊರ ಬಂದ ಲಕ್ಷ್ಮೀ ಅವರು, ‘ನಿನಗೆ ಯಾರೂ ಅಕ್ಕತಂಗಿಯರು ಇಲ್ಲವೆ? ಹೀಗೇಕೆ ಮಾಡುತ್ತಿರುವೆ’ ಎಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 ಕೂಡಲೇ ಆರೋಪಿಯು ತನ್ನ ಬಳಿ ಇದ್ದ ಚಾಕುವಿನಿಂದ ಇರಿಯಲು ಹೋಗಿದ್ದಾನೆ. ಲಕ್ಷ್ಮೀ ಅವರು ತಮ್ಮ ಕೈ ಅಡ್ಡ ಹಿಡಿದಿದ್ದರಿಂದ ಅವರ ಕೈಗೆ ತೀವ್ರ ಗಾಯವಾಯಿತು. ಅವರು ಕಿರುಚಿಕೊಂಡಾಗ ಪತಿ ಮಹಾಂತೇಶ ಮತ್ತು ಸಹ ಪ್ರಯಾಣಿಕರು ಬಂದು ವಿಚಾರಿಸುವ ಹೊತ್ತಿಗೆ ಆರೋಪಿ ಪರಾರಿಯಾಗಿದ್ದ.
 ಲಕ್ಷ್ಮೀ ಮತ್ತು ಅವರ ಕುಟುಂಬದವರು ದಾವಣಗೆರೆ ನಿಲ್ದಾಣದಲ್ಲಿ ಇಳಿದುಕೊಂಡು ಜಿಲ್ಲಾಸ್ಪತ್ರೆಗೆ ತೆರಳಿದರು. ಅಲ್ಲಿ ಲಕ್ಷ್ಮೀ ಅವರಿಗೆ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಯಿತು. ಶುಕ್ರವಾರ ಬೆಳಗ್ಗೆ ಲಕ್ಷ್ಮೀ ಅವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.
 ...
 (ಬಾಕ್ಸ್)
 ರೈಲಿನಿಂದ ಜಿಗಿದ
 ರೈಲು ಚಿಕ್ಕಜಾಜೂರು-ಮಾಯಕೊಂಡ ಮಧ್ಯೆ ಇದ್ದಾಗ ಆರೋಪಿಯು ಚಲಿಸುವ ರೈಲಿನಿಂದ ಕೆಳಗೆ ಜಿಗಿದಿದ್ದಾನೆ.
 ರೈಲಿನ ಬಾಗಿಲ ಬಳಿಯಿಂದ ಹೋಗಿ ಕಿಟಕಿಗೆ ಸ್ವಲ್ಪ ಹೊತ್ತು ಜೋತು ಬಿದ್ದಿದ್ದಾನೆ. ಒಂದು ಹಂತದಲ್ಲಿ ಕೈಜಾರಿ ಕೆಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ಆತನ ತಲೆಗೆ ಗಂಭೀರ ಗಾಯಗಳಾಗಿದ್ದವು.
 ಸ್ಥಳೀಯರು 108ಗೆ ಕರೆ ಮಾಡಿ ಆಂಬುಲೆನ್ಸ್‌ನಲ್ಲಿ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕಳಿಸಿಕೊಟ್ಟರು. ವಿಷಯ ತಿಳಿದ ದಾವಣಗೆರೆ ರೈಲ್ವೆ ಪೊಲೀಸರು ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ್ದರು.
 ...
 (ಬಾಕ್ಸ್)
 ಪೊಲೀಸರ ಸಮಯಪ್ರಜ್ಞೆ
 ಆಸ್ಪತ್ರೆಗೆ ಭೇಟಿ ನೀಡಿದಾಗ ಮೊದಲು ಆತ ಅಂಜಲಿಯ ಹಂತಕ ಎಂಬುದು ರೈಲ್ವೆ ಪೊಲೀಸರಿಗೆ ಗೊತ್ತಿರಲಿಲ್ಲ.
 ಕೆಲ ಹೊತ್ತಿನ ಬಳಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ಆರೋಪಿಯ ಭಾವಚಿತ್ರವನ್ನು ಗಮನಿಸಿದ ಎಎಸ್‌ಐ ನಾಗರಾಜ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ಎಂ. ಪಾಟೀಲ್ ಅವರಿಗೆ ಅನುಮಾನ ಬಂದು ರಾತ್ರಿ ಮತ್ತೆ ಆಸ್ಪತ್ರೆಗೆ ತೆರಳಿ ಖಚಿತಪಡಿಸಿಕೊಂಡರು. ಅವರು ನೀಡಿದ ಮಾಹಿತಿ ಆಧರಿಸಿ ಹುಬ್ಬಳ್ಳಿ ಪೊಲೀಸರು ಆಗಮಿಸಿ ಆರೋಪಿ ವಿಶ್ವನಾಥನನ್ನು ವಶಕ್ಕೆ ಪಡೆದು ಕರೆದೊಯ್ದರು.
 ಪೊಲೀಸರು ಬರುವ ಮೊದಲು ಆರೋಪಿಯು ಆಸ್ಪತ್ರೆಯ ಹೊರಗೆ ಬಂದು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ ಎಂದು ಮೂಲಗಳು ತಿಳಿಸಿವೆ.
 ...
 (ಬಾಕ್ಸ್)
 ವಿಕೃತ ಕಾಮಿ?
 ಹಂತಕ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತನ ವರ್ತನೆಗಳನ್ನು ಗಮನಿಸಿದರೆ ಆತ ವಿಕೃತ ಕಾಮಿಯೆ ಎಂಬ ಅನುಮಾನ ವ್ಯಕ್ತವಾಗಿದೆ.
 ರೈಲಿನಲ್ಲಿ ಮಹಿಳೆಯೊಂದಿಗೆ ಆತ ವರ್ತಿಸಿದ ರೀತಿ, ವಾಶ್‌ರೂಮ್‌ನಲ್ಲಿ ಇಣುಕಿ ನೋಡಿದ್ದು, ನಂತರ ಆಕೆಯ ಕೊಲೆಗೆ ಯತ್ನಿಸಿದ್ದು ಆತನ ಮಾನಸಿಕತೆಯ ಬಗ್ಗೆ ತಿಳಿಸುತ್ತದೆ ಎನ್ನುತ್ತವೆ ಮೂಲಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net