

ದಾವಣಗೆರೆ : ತಾಲೂಕಿನ ಕುರ್ಕಿ ಗ್ರಾಮದ ಬಳಿಯ ರೈಲ್ವೆ ಅಂಡರ್ ಪಾಸ್‌ನಲ್ಲಿ ಗುರುವಾರ ರಾತ್ರಿ ಭಾರೀ ಮಳೆಯಿಂದ ಸಂಗ್ರಹವಾದ ನೀರಿನಲ್ಲಿ ಟ್ರಾೃಕ್ಟರ್ ಸಿಕ್ಕಿಹಾಕಿಕೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿ ಕೃಷಿ ಕಾರ್ಮಿಕರನ್ನು ದಾವಣಗೆರೆ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಬಸವರಾಜ, ಆದರ್ಶ, ವೆಂಕಟೇಶ್, ಆನಂದ್, ಗೋವಿಂದಪ್ಪ, ರುದ್ರಪ್ಪ, ರಮೇಶ, ಅಶೋಕ್, ರಾಕೇಶ್, ತೀರ್ಥಪ್ಪ ಸಿಕ್ಕಿ ಹಾಕಿಕೊಂಡಿದ್ದವರು. ಇವರು ಟ್ರಾೃಕ್ಟರ್‌ನಲ್ಲಿ ಹಸಿ ಅಡಕೆ ತುಂಬಿಕೊಂಡು ತೋಳಹುಣಸೆ ಕಡೆಯಿಂದ ಚಿಕ್ಕಗಂಗೂರು ಗ್ರಾಮದ ಬಳಿಯ ಲಕ್ಷ್ಮೀಸಾಗರಕ್ಕೆ ತೆರಳುತ್ತಿದ್ದರು. ಇದ್ದಕ್ಕಿದ್ದಂತೆ ಮಳೆ ಹೆಚ್ಚಾಗಿ ಅಂಡರ್‌ಪಾಸ್‌ನಲ್ಲಿ ನೀರು ಸಂಗ್ರಹವಾಗಿದ್ದರಿಂದ ಟ್ರಾೃಕ್ಟರ್ ಮುಂದಕ್ಕೆ ಚಲಿಸಲಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ದಾವಣಗೆರೆ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಎನ್. ನಾಗೇಶ್ ಮತ್ತು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್. ಅಶೋಕ್ ಕುಮಾರ್ ಮತ್ತು ಸಿಬ್ಬಂದಿಗಳಾದ ಭೀಮರಾವ್ ಉಪ್ಪಾರ್, ಮಹಮ್ಮದ್ ರಫೀಕ್, ಟಿಸಿ ನಾಗರಾಜ್, ಗಂಗಾ ನಾಯ್ಕ, ನಯಾಜ್, ಧರಣೇಶ ಪರಶುರಾಮ ಕಾರ್ಯಾಚರಣೆ ನಡೆಸಿದರು. ಲೈಫ್ ಜಾಕೆಟ್ ಮತ್ತು ಹಗ್ಗಗಳ ಸಹಾಯದಿಂದ ಜೀವ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸೇರಿಸಲಾಯಿತು. ಸ್ಥಳೀಯರ ಸಹಾಯದಿಂದ ಟ್ಯಾಕ್ಟರನ್ನು ನೀರಿನಿಂದ ಮೇಲಕ್ಕೆ ತರಲಾಯಿತು.