ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸಿ ಸರ್ಕ್ಯೂಟ್

dvg-Harihareshwara-temple.jpg
Published on

ರಮೇಶ ಜಹಗೀರದಾರ್ ದಾವಣಗೆರೆ : ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸಿ ಸರ್ಕ್ಯೂಟ್ ಪ್ರಾರಂಭಿಸುವ ಪ್ರಸ್ತಾವನೆಯನ್ನು ಜಿಲ್ಲಾಡಳಿತ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸಲ್ಲಿಸಿದ್ದು ಶೀಘ್ರವೇ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.  ಬೆಣ್ಣೆದೋಸೆ, ಖಾರ-ಮಂಡಕ್ಕಿ ಮಾತ್ರ ದಾವಣಗೆರೆಯ ವಿಶೇಷ ಎಂಬ ಭಾವನೆ ಹಲವರಲ್ಲಿದೆ. ಮಧ್ಯ ಕರ್ನಾಟಕದ ಈ ಜಿಲ್ಲೆಯು ಅನೇಕ ಸುಂದರ ಪ್ರವಾಸಿ ತಾಣಗಳ ಬೀಡು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಐತಿಹಾಸಿಕ, ಧಾರ್ಮಿಕ, ನೈಸರ್ಗಿಕವಾಗಿ ಮಹತ್ವ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.  ಆದರೆ ಅಲ್ಲಿಗೆ ತೆರಳುವುದು ಹೇಗೆ?, ಅಲ್ಲಿ ಅಗತ್ಯ ಸೌಲಭ್ಯಗಳಿವೆಯೆ ಎಂಬುದು ಬಹಳ ಜನರ ಪ್ರಶ್ನೆಯಾಗಿದೆ. ಇದನ್ನು ಮನಗಂಡು ಪ್ರವಾಸಿ ಸರ್ಕ್ಯೂಟ್ ಮಾಡುವ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಒಂದು ಜಾಗದಿಂದ ಆರಂಭಿಸಿ, ಜಿಲ್ಲೆಯ 6 ತಾಲೂಕುಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿರುವ ಸ್ಥಳಗಳಿಗೆ ಜನರನ್ನು ಕರೆದೊಯ್ಯುವ ಯೋಜನೆ ಸಿದ್ಧವಾಗುತ್ತಿದೆ.  ಜಿಲ್ಲೆಯಲ್ಲಿ 2018 ರಿಂದ 2024 ರ ವರೆಗೆ 69.87ಲಕ್ಷ ಪ್ರವಾಸಿಗರು ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. 380 ವಿದೇಶಿ ಪ್ರಯಾಣಿಕರು ಬಂದು ಹೋಗಿದ್ದಾರೆ. ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶ ಇಲಾಖೆಗಿದೆ.  ...    ಯಾವ ಸ್ಥಳಗಳು?  ಪ್ರವಾಸಿ ಸರ್ಕ್ಯೂಟ್‌ನಲ್ಲಿ ಹರಿಹರೇಶ್ವರ ದೇವಸ್ಥಾನ, ತುಂಗಾರತಿ ಸ್ಥಳ, ಆರೋಗ್ಯ ಮಾತಾ ಚರ್ಚ್ (ಹರಿಹರ), ಕೊಂಡಜ್ಜಿ ಕೆರೆ, ಶ್ರೀ ಕರಿಬಸವೇಶ್ವರ ದೇವಸ್ಥಾನ (ಉಕ್ಕಡಗಾತ್ರಿ), ಗಾಜಿನ ಮನೆ (ದಾವಣಗೆರೆ), ಸೂಳೆಕೆರೆ (ಚನ್ನಗಿರಿ ತಾಲೂಕು), ಷಹಾಜಿ ಬೋಸ್ಲೆ ಸ್ಮಾರಕ (ಹೊದಿಗೆರೆ), ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ (ದೇವರಹಳ್ಳಿ), ಪುಷ್ಕರಣಿ (ಸಂತೇಬೆನ್ನೂರು), ಚನ್ನಗಿರಿ ಕೋಟೆ, ಕುಕ್ಕುವಾಡೇಶ್ವರಿ ದೇವಸ್ಥಾನ (ಅಮ್ಮನಗುಡ್ಡ), ನ್ಯಾಮತಿ ತಾಲೂಕಿನ ತೀರ್ಥರಾಮೇಶ್ವರ ದೇವಸ್ಥಾನ (ತೀರ್ಥ ರಾಂಪುರ), ಹಿರೇಕಲ್ಮಠ (ಹೊನ್ನಾಳಿ).  ...    41 ತಾಣಗಳ ಘೋಷಣೆ  ರಾಜ್ಯ ಸರ್ಕಾರ ‘ಕರ್ನಾಟಕ ಪ್ರವಾಸೋದ್ಯಮ ನೀತಿ 2024-29’ ನ್ನು ಅನುಷ್ಠಾನಕ್ಕೆ ತಂದಿದೆ. ನೂತನ ನೀತಿಯಡಿ ಜಿಲ್ಲೆಯಲ್ಲಿ 41 ಪ್ರವಾಸಿ ತಾಣಗಳನ್ನು ಘೋಷಣೆ ಮಾಡಲಾಗಿದೆ.  ಈ ತಾಣಗಳಲ್ಲಿ ಕುಡಿಯುವ ನೀರು, ಪಾದಚಾರಿ ರಸ್ತೆ ನಿರ್ಮಾಣ, ಉದ್ಯಾನವನಗಳ ಸೌಂದರ್ಯೀಕರಣ, ಆಸನಗಳು, ಬೀದಿದೀಪ, ಮಹಾದ್ವಾರ ನಿರ್ಮಾಣ, ವಿಶ್ರಾಂತಿ ಗೃಹ, ಶೌಚಗೃಹ, ವಾಹನ ನಿಲುಗಡೆಗೆ ವ್ಯವಸ್ಥೆ ಸೇರಿ ಮೂಲಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವಿದೆ.  ಈ ನಿಟ್ಟಿನಲ್ಲಿ ಈಗಾಗಲೇ ಚನ್ನಗಿರಿ ತಾಲೂಕು ಹೊದಿಗೆರೆ ಸ್ಮಾರಕ ಅಭಿವೃದ್ಧಿಗೆ 1 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆಗಾಗಿ ಕಳಿಸಲಾಗಿದೆ. ಮಾಯಕೊಂಡದಲ್ಲಿರುವ ಮದಕರಿ ನಾಯಕರ ಸಮಾಧಿ, ಅಮ್ಮನಗುಡ್ಡದ ದೇವಸ್ಥಾನ ಪರಿಸರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

 ಬುಡಕಟ್ಟು ಗ್ರಾಮಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೋಮ್-ಸ್ಟೇ ನಿರ್ಮಿಸಲು ಉತ್ತೇಜನ ನೀಡಲಾಗುತ್ತಿದೆ.  ಬುಡಕಟ್ಟು ಸಮುದಾಯದವರಿಗೆ ಈ ಯೋಜನೆ ಮೀಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 122 ಆಸಕ್ತರು ಹೋಮ್-ಸ್ಟೇ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.  ಪ್ರತಿ ಹೋಮ್-ಸ್ಟೇನಲ್ಲಿ 2 ಹೊಸ ಕೊಠಡಿ ನಿರ್ಮಾಣಕ್ಕೆ 5 ಲಕ್ಷ ಹಾಗೂ ನವೀಕರಣಕ್ಕೆ 3 ಲಕ್ಷ ರೂ.ಗಳ ಸಹಾಯಧನ ನೀಡಲಾಗುತ್ತದೆ.  

ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದ ಕೊಂಡುಕುರಿ ವನ್ಯಧಾಮದಲ್ಲಿ ಇಕೋ ಟೂರಿಸಂ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಉತ್ಸುಕತೆ ತೋರಿದೆ.  ಈ ಕುರಿತು ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಕೊಂಡುಕುರಿ ವನ್ಯಧಾಮದಲ್ಲಿ ಸಫಾರಿ ಮಾಡುವುದು, ನಿರ್ದಿಷ್ಟ ಸ್ಥಳದಲ್ಲಿ ನಿಂತು ಅಲ್ಲಿನ ಪ್ರಕೃತಿ ಸೌಂದರ್ಯ ಮತ್ತು ವನ್ಯ ಮೃಗಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಬೇಕು ಎಂಬ ಚಿಂತನೆ ನಡೆದಿದೆ.  ಈ ಬಾರಿಯ ದಸರಾ ರಜೆಯಲ್ಲಿ ಕರ್ನಾಟಕ ದರ್ಶನ ಯೋಜನೆಯಡಿ ಜಿಲ್ಲೆಯ 838 ಮಕ್ಕಳನ್ನು ಇಲಾಖೆಯಿಂದ ಪ್ರವಾಸಕ್ಕೆ ಕರೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿ ತರಬೇತಿಯನ್ನು ಕಲ್ಪಿಸಲಾಗಿದೆ.

 ಜಿಲ್ಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕೆ.ಎಸ್.ಟಿ.ಡಿ.ಸಿ. ವತಿಯಿಂದ 1 ದಿನದ ಪ್ರವಾಸಿ ಸರ್ಕ್ಯೂಟ್ ಪ್ರಾರಂಭಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆ ಶೀಘ್ರವೇ ಚಾಲನೆಗೊಳ್ಳುವ ನಿರೀಕ್ಷೆಯಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಆಗುವುದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಪ್ರವಾಸಿ ತಾಣಗಳಲ್ಲಿ ಆದಾಯ ವೃದ್ಧಿಯಾಗಲಿದೆ. ಸ್ಥಳೀಯ ಆರ್ಥಿಕತೆಯೂ ಬೆಳೆಯುತ್ತದೆ.   ಕಾವ್ಯಾ ಬಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net