

ದಾವಣಗೆರೆ : ಇಲ್ಲಿನ ಕೆಟಿಜೆ ನಗರದ 10 ನೇ ತಿರುವಿನಲ್ಲಿರುವ ಶನೈಶ್ಚರ ಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ವಿದ್ಯಾಗಣಪತಿ, ಅಭಯಹಸ್ತ ಆಂಜನೇಯ, ಜಗದಾಂಬ, ನವಗ್ರಹ ಸಹಿತ ಶನೈಶ್ಚರ ದೇವಾಲಯದಲ್ಲಿ ಗುರುವಾರ ಶನೈಶ್ಚರ ಜಯಂತಿ ಮತ್ತು ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಸ್ವಾಮಿಗೆ ಪೂಜೆ ಸಲ್ಲಿಸಿ ರಥ ಎಳೆಯುವ ಮೂಲಕ ಚಾಲನೆ ನೀಡಿದರು. ನಂತರ ಕೆಟಿಜೆ ನಗರದ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ವೈಭವದ ರಥೋತ್ಸವ ನಡೆಯಿತು. ದಾರಿಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿದರು. ಕುಂಭ ಹೊತ್ತ ಮಹಿಳೆಯರ ಮೆರವಣಿಗೆ ರಥೋತ್ಸವಕ್ಕೆ ಮೆರುಗು ನೀಡಿತು.
ನಂತರ ನಡೆದ ಅನ್ನಸಂತರ್ಪಣೆಯಲ್ಲಿ 3 ಸಾವಿರ ಜನರು ಪ್ರಸಾದ ಸ್ವೀಕರಿಸಿದರು. ಬುಧವಾರ ಮಂತ್ರಾಲಯದಿಂದ ಆಗಮಿಸಿದ್ದ ವಟುಗಳಿಂದ ಹೋಮ, ಹವನ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಎರಡು ದಿನಗಳ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಸಹ ಕಾರ್ಯದರ್ಶಿ ಡಿ.ಎನ್. ಜಗದೀಶ್, ಕಾರ್ಯದರ್ಶಿ ಎ.ವೈ. ಕೃಷ್ಣಮೂರ್ತಿ, ಖಜಾಂಚಿ ನಂಜುಂಡಪ್ಪ, ನಿರ್ದೇಶಕರಾದ ಅಶೋಕ್, ರಾಜಣ್ಣ, ಎನ್. ಶ್ರೀನಿವಾಸ್, ಆರಣಿ ತಿಮ್ಮಯ್ಯ, ತಿಮ್ಮಪ್ಪ ಹುಲಿಕೆರೆ, ಇಎಸ್‌ಐ ಶ್ರೀನಿವಾಸ್, ಷಣ್ಮುಖಪ್ಪ, ಮೀನಾಕ್ಷಮ್ಮ, ಚೌಧರಿ ರಂಗಪ್ಪ ಪಾಲ್ಗೊಂಡಿದ್ದರು.