

ದಾವಣಗೆರೆ : ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ನೂತನ ವಿಗ್ರಹ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಮಂತ್ರಾಕ್ಷತೆ ಪೂಜೆ, ಮೆರವಣಿಗೆ ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಜಿಲ್ಲಾ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮ ನಡೆದವು.
ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ನಗರದ ಪಿ.ಬಿ.ರಸ್ತೆಯ ಶ್ರೀ ಕೋದಂಡರಾಮ ದೇವರ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಪೂಜೆ ನೆರವೇರಿಸಲಾಯಿತು. ಮಹಿಳೆಯರು ಶ್ರೀರಾಮ ಜಯರಾಮ ಜಯಜಯರಾಮ ವಿಜಯ ಮಹಾಮಂತ್ರ ಪಠಿಸಿದರು. ಭಜನೆಯ ಮೂಲಕ ಶ್ರೀರಾಮನನ್ನು ಭಜಿಸಿದರು.
ದೇವಸ್ಥಾನದಿಂದ ನಾದಸ್ವರದೊಂದಿಗೆ ಮಂತ್ರಾಕ್ಷತೆಯ ಭವ್ಯ ಮೆರವಣಿಗೆ ನಡೆಯಿತು. ಪೂರ್ಣಕುಂಭ ಹಾಗೂ ಮಂತ್ರಾಕ್ಷತೆ ತುಂಬಿದ ಕೊಡಗಳನ್ನು ಹೊತ್ತ ಮಹಿಳೆಯರು ನಗರದ ಗಾಂಧಿ ವೃತ್ತ, ಅಶೋಕ ರಸ್ತೆ, ಜಯದೇವ ಸರ್ಕಲ್ ಹಾಗೂ ಕುವೆಂಪು ರಸ್ತೆಯಲ್ಲಿ ಮೆರವಣಿಗೆ ಮೂಲಕ ಜಿಲ್ಲಾ ಕಾರ್ಯಾಲಯಕ್ಕೆ ಸಾಗಿದರು.
ನಂತರ ಗೋ ಪೂಜೆ ನೆರವೇರಿಸುವ ಮೂಲಕ ಜಿಲ್ಲಾ ಕಾರ್ಯಾಲಯ ಉದ್ಘಾಟಿಸಲಾಯಿತು. ಕಾರ್ಯಾಲಯದಲ್ಲಿ ಶ್ರೀರಾಮ ಮಂದಿರ ಹಾಗೂ ಶ್ರೀರಾಮನ ಭಾವಚಿತ್ರದ ಮುಂಭಾಗ ಮಂತ್ರಾಕ್ಷತೆಯ ಕೊಡಗಳು ಹಾಗೂ ಅಯೋದ್ಯೆಯ ಶ್ರೀರಾಮ ಮಂದಿರದ ಭಾವಚಿತ್ರದ ಕಟ್ಟುಗಳನ್ನಿರಿಸಿ ಪೂಜೆ ಸಲ್ಲಿಸಲಾಯಿತು. ಸಾರ್ವಜನಿಕರು ಅಕ್ಷತೆ ಹಾಕಿ ನಮನ ಸಲ್ಲಿಸಿದರು.
ನಗರ ಮತ್ತು ಗ್ರಾಮಾಂತರ ತಾಲೂಕು ಸಂಯೋಜಕ ಸಿದ್ದಲಿಂಗಸ್ವಾಮಿ ಮಾತನಾಡಿ, ಅಯೋಧ್ಯೆಯ ಕಾರ್ಯಕ್ರಮ ಪ್ರಯುಕ್ತ ಜ.1 ರಿಂದ 15ರ ವರೆಗೆ ಶ್ರೀರಾಮ ಮಂದಿರ ಮಂತ್ರಾಕ್ಷತೆ, ಭಾವಚಿತ್ರ ಹಾಗೂ ಆಹ್ವಾನ ಪತ್ರಿಕೆಯನ್ನು ಮನೆಮನೆಗೆ ತಲುಪಿಸುವ ಅಭಿಯಾನ ನಡೆಸಲಾಗುವುದು. ಜಿಲ್ಲೆಯಲ್ಲಿ 4 ಲಕ್ಷ ಮನೆಗಳಿಗೆ ತಲುಪಿಸುವ ಯೋಜನೆಯಿದೆ ಎಂದು ತಿಳಿಸಿದರು.
ಶ್ರೀರಾಮಲಲ್ಲಾ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಸಂಜೆ ಮನೆಮನೆಗಳ ಮುಂದೆ ಐದು ದೀಪಗಳನ್ನು ಬೆಳಗುವ ಮೂಲಕ ರಾಮ ದೀಪಾವಳಿ ಆಚರಿಸಲಾಗುವುದು. ಕಾರ್ಯಾಲಯದಲ್ಲಿ ನಿತ್ಯ ಪೂಜೆ ಹಾಗೂ ಭಜನೆಗಳು ನಡೆಯಲಿವೆ. ಫೆಬ್ರವರಿಯಲ್ಲಿ ಪ್ರಭು ಶ್ರೀರಾಮಲಲ್ಲಾ ಹಾಗೂ ಮಂದಿರವನ್ನು ದರ್ಶಿಸಲು ಅಯೋಧ್ಯೆಗೆ ತೆರಳಲಾಗುವುದು ಎಂದು ಹೇಳಿದರು.
ಗು.ರುದ್ರಯ್ಯ, ಅರುಣ್ ಗುಡ್ಡದಕೇರಿ, ಅಜಿತ್ ಓಸ್ವಾಲ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಹಾನಗರ ಪಾಲಿಕೆ ಸದಸ್ಯೆ ಎಸ್.ಟಿ.ವೀರೇಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಆರೈಕೆ ಆಸ್ಪತ್ರೆಯ ಡಾ.ರವಿಕುಮಾರ್, ವಿಶ್ವಾಸ್, ಕೆ.ವಿ.ಗುರು, ಶೋಭಾ, ಚೇತನಾ ಇತರರು ಇದ್ದರು. ಭಕ್ತರಿಗೆ ಕೋಸಂಬರಿ ಹಾಗೂ ಪಾನಕ ವಿತರಿಸಲಾಯಿತು.