ಆನೆಕೊಂಡ ಐತಿಹಾಸಿಕ ದೇವಸ್ಥಾನದ ಜೀರ್ಣೋದ್ಧಾರ

dvg-temple_20250731010626286.jpg
Published on

ದಾವಣಗೆರೆ  : ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚಿಸಿದರು.  ಪ್ರಖ್ಯಾತ, ಐತಿಹಾಸಿಕ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನಕ್ಕೆ ಬುಧವಾರ ಅಧಿಕಾರಿಗಳೊಂದಿಗೆ ತೆರಳಿ ವೀಕ್ಷಣೆ ಮಾಡಿದ ನಂತರ ಮಾತನಾಡಿದರು.  ಈ ದೇವಸ್ಥಾನವನ್ನು 11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಶ್ರೀ ಬಸವೇಶ್ವರ ಮತ್ತು ಶಿವನಿಗೆ ಅರ್ಪಿತವಾದ ಪ್ರಾಚೀನ ದೇವಾಲಯವು ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಈ ಭಾಗದ ಭಕ್ತರ ಆರಾಧ್ಯ ದೈವವೂ ಆಗಿದೆ. ದೇಗುಲದ ಜೀರ್ಣೋದ್ಧಾರಕ್ಕಾಗಿ ದೇವಸ್ಥಾನ ಸಮಿತಿಯವರು ಹಾಗೂ ಭಕ್ತರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಪರೀಶಿಲನೆ ನಡೆಸಲಾಗಿದೆ. ಅಗತ್ಯ ಕ್ರಮಗಳಿಗೆ ಸೂಚಿಸಲಾಗಿದೆ ಎಂದರು.  ಆಕರ್ಷಕವಾಗಿರುವ ಈ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳು ಜರುಗಲಿದ್ದು, ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯುತ್ತದೆ. ಕರ್ನಾಟಕ ಮತ್ತು ಅನ್ಯ ರಾಜ್ಯಗಳ ಭಕ್ತರು ಹಾಗೂ ಪ್ರವಾಸಿಗರನ್ನು ಈ ದೇವಾಲಯ ಸೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಚೀನ ಕುರುಹುಗಳ ರಕ್ಷಣೆಗಾಗಿ ದೇವಸ್ಥಾನದ ಜೀರ್ಣೋದ್ಧಾರವು ಮುಖ್ಯವಾಗಿದೆ ಎಂದು ತಿಳಿಸಿದರು.  ಇದೇ ವೇಳೆ ಸಾರ್ವಜನಿಕರು ಸಚಿವರಿಗೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು. ಕುಂದುಕೊರತೆಗಳನ್ನು ಆಲಿಸಿದ ಸಚಿವರು ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ತಿಳಿಸಿದರು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎ.ಪಿ.ಎಂ.ಸಿಯ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಸ್ಥಳೀಯ ಮುಖಂಡರು, ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net