ಮುಜರಾಯಿ ಇಲಾಖೆಗೆ ವಹಿಸಲಿ ದೇಗುಲ

IMG-20250717-WA0007.jpg
Published on

ದಾವಣಗೆರೆ :  ನಗರದ ಎಂಸಿಸಿ ‘ಬಿ’ ಬ್ಲಾಕ್‌ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯವನ್ನು ಮುಜರಾಯಿ ಇಲಾಖೆಗೆ ವಹಿಸಿ ಹೊಸದಾಗಿ ಆಡಳಿತ ಮಂಡಳಿಯನ್ನು ರಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಆಗ್ರಹಿಸಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಸ್ಥಾನದ ಆಡಳಿತ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.  ದಾವಣಗೆರೆ ನಗರಸಭೆಯಿಂದ ನಾಗರಿಕ ಸೌಲಭ್ಯ ನಿವೇಶನವನ್ನು ಪಡೆದು 1991 ರಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಇದನ್ನು ಒಂದು ಕುಟುಂಬದವರು ನಡೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.  ದೇವಸ್ಥಾನದ ಚಟುವಟಿಕೆ, ವ್ಯವಹಾರಗಳ ಸಂಬಂಧ ಲೆಕ್ಕಪತ್ರ, ದಾಖಲಾತಿಗಳನ್ನು ನಿರ್ವಹಣೆ ಮಾಡಿಲ್ಲ. ಭಕ್ತರು ನೀಡಿದ ದೇಣಿಗೆ ಹಣ, ಒಡವೆ, ವಸ್ತ್ರ, ದವಸ ಧಾನ್ಯ ಇನ್ನಿತರ ವಸ್ತುಗಳು ದುರುಪಯೋಗವಾಗಿವೆ ಎಂದು ದೂರಿದರು.  ಧಾರ್ಮಿಕ ಸಂಪ್ರದಾಯಗಳನ್ನು ಸರಿಯಾಗಿ ಪಾಲಿಸಿಲ್ಲ. ಭಕ್ತರ ನಂಬಿಕೆಗೆ ದ್ರೋಹ ಬಗೆಯಲಾಗಿದೆ. ದೇವಸ್ಥಾನಕ್ಕೆ ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಬರುತ್ತದೆ. ಅದು ದೇಗುಲದ ಅಭಿವೃದ್ಧಿಗೆ ಬಳಕೆಯಾಗಿಲ್ಲ. ಮೂಲಸೌಲಭ್ಯ ಕಲ್ಪಿಸಿಲ್ಲ. ದಾಸೋಹದ ವ್ಯವಸ್ಥೆ ಮಾಡುತ್ತಿಲ್ಲ ಎಂದು ಆರೋಪಿಸಿದರು.  ದೇವಸ್ಥಾನದ ಅವ್ಯವಹಾರಗಳ ಬಗ್ಗೆ ಮುಜರಾಯಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದೆವಿ. ಅದರ ಪರಿಣಾಮವಾಗಿ ಉಪ ವಿಭಾಗಾಧಿಕಾರಿಗಳು ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ನಮ್ಮ ಕಡೆಯಿಂದಲೂ ಬಹಳಷ್ಟು ದಾಖಲೆಗಳನ್ನು ಒದಗಿಸಿದ್ದೇವೆ. ಎಲ್ಲವನ್ನೂ ಪರಿಶೀಲಿಸಿ ದೇವಸ್ಥಾನ ಮತ್ತು ಭಕ್ತರ ಹಿತ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  ಕೆಲವು ಪ್ರಭಾವಿಗಳು ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಹೋಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.  ಕನ್ನಡಪರ ಹೋರಾಟಗಾರ ಕೆ.ಟಿ. ಗೋಪಾಲಗೌಡ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ವಾಮಾಚಾರ ನಡೆಸಲಾಗಿದೆ. ದೇವಸ್ಥಾನದ ಬಗ್ಗೆ ಸುಳ್ಳು ಲೆಕ್ಕ ತೋರಿಸಿದ್ದಾರೆ ಎಂದು ಆರೋಪಿಸಿದರು.  ದೇವಸ್ಥಾನದಲ್ಲಿ ಈ ಹಿಂದೆ ಅರ್ಚಕರಾಗಿದ್ದ ಬಾಲಾಜಿ ಅಯ್ಯಂಗಾರ್, ನಾಗರಾಜ ಸುರ್ವೆ, ಪ್ರವೀಣ್ ಕುಮಾರ್ ಎ.ಆರ್, ಪ್ರವೀಣ್  ಸಿ, ಕೇಶವ್, ವಸುಂಧರಾ, ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net