

ಚನ್ನಗಿರಿ : ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಬೇಕು. ಜಾತ್ರೆ, ಮಾರಿಹಬ್ಬ ಹಾಗೂ ಹರಕೆಗಳ ಹೆಸರಿನಲ್ಲಿ ಕುರಿ, ಕೋಳಿ ಬಲಿ ಕೊಡುವುದನ್ನು ನಿಲ್ಲಿಸಬೇಕು ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಆಗ್ರಹಿಸಿದರು. ಚನ್ನಗಿರಿ ತಾಲೂಕಿನ ಮರಡಿ ಗ್ರಾಮದಲ್ಲಿ ಶ್ರೀ ಕುಕ್ಕವಾಡೇಶ್ವರಿ ದೇವಿ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಶುಕ್ರವಾರ ಮಾತನಾಡಿದರು. ಜನರಲ್ಲಿನ ಮೌಢ್ಯ, ಕಂದಾಚಾರ ಹೋಗಬೇಕು. ದೇವರಿಗೆ ಬಲಿ ನೀಡಬೇಕು ಎಂದು ಎಲ್ಲಿಯೂ ಹೇಳಿಲ್ಲ. 21ನೇ ಶತಮಾನಕ್ಕೆ ಬಂದಿದ್ದೇವೆ, ಜನರಲ್ಲಿ ಜಾಗೃತ ಭಾವನೆ ಮೂಡಬೇಕು. ಭಕ್ತರು ಸಂಕಲ್ಪ ಮಾಡಬೇಕು. ನಿತ್ಯದುಡಿ, ಸತ್ಯನುಡಿ ಹಾಗೂ ಸುಖಪಡಿ ಎನ್ನುವುದು ಮನುಷ್ಯನ ಬದ್ಧತೆಯಾಗಬೇಕು ಎಂದು ಹೇಳಿದರು. ಬೌದ್ಧಿಕವಾಗಿ ಶ್ರೀಮಂತನಾದರೆ ಆಧುನಿಕತೆ, ಆಂತರಿಕವಾಗಿ ಸಿರಿವಂತನಾದರೆ ಆಧ್ಯಾತ್ಮಿಕ ಹಾಗೂ ಆತ್ಮವಿವೇಚನೆಯ ಶಕ್ತಿಯ ಸ್ವರೂಪನಾಗುತ್ತಾನೆ. ಸಾವಯವ ಪರಿಸರ ನಿರ್ಮಾಣಕ್ಕೆ ಬದ್ಧರಾದರೆ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಶಿಕ್ಷಣ ದೊಡ್ಡ ಶಕ್ತಿಯಾಗಿದೆ. ಪುಸ್ತಕ ನಮ್ಮ ಸ್ನೇಹಿತನಾಗಬೇಕು. ದೇಶದ ಪರಂಪರೆ, ಸಂಸ್ಕೃತಿ ಹಾಗೂ ಸಂಸ್ಕಾರ ವಿಶ್ವಕ್ಕೆ ಮಾದರಿಯಾಗಿದೆ. ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಬಿಪಿಎಲ್ ಕುಟುಂಬಗಳಿಗೆ ಹೆರಿಗೆ, ಡಯಾಲಿಸಿಸ್, ಕಣ್ಣು ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಎಸ್‌ಎಸ್ ಹೈಟೆಕ್ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಜನರು ಇದರ ಅನುಕೂಲತೆ ಪಡೆದುಕೊಳ್ಳಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮಾಜಿ ಕಾರ್ಯದರ್ಶಿ ಎಂ.ಬಿ. ನಾಗರಾಜ್ ಕಾಕನೂರು ಮಾತನಾಡಿ, ದೇವರು ನಿರಾಕಾರ, ನಂಬಿಕೆ, ಪೂಜೆ ಎಂಬುದು ಕಾಯಕ ಭಕ್ತಿ. ಅವುಗಳು ನಮ್ಮ ಮನಸ್ಸಿನಲ್ಲಿ ಇರಬೇಕು. ಮಾಡಿದ ಪಾಪಕ್ಕೆ ನಮ್ಮಗಳ ಮನವೇ ಸಾಕ್ಷಿಯಾಗಿರುತ್ತದೆ. ತೋಡಿದ ಬಾವಿಗೆ ಜಲವೇ ಸಾಕ್ಷಿಯಾಗಿದೆ ಎಂದರು. ಮಾಜಿ ಶಾಸಕ ಮಾಹಿಮ ಪಟೇಲ್, ಕೆಪಿಸಿಸಿ ವಕ್ತಾರ ಹೊದಿಗೆರೆ ರಮೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪ ಪ್ರಕಾಶ್, ಪವನ್ ಕುಮಾರ್, ರೇಣುಕಮ್ಮ, ಸದಸ್ಯರಾದ ಮೂರ್ತಪ್ಪ, ಮಹಂತಪ್ಪ, ಸಿದ್ದಪ್ಪ, ಜೈಕುಮಾರ್, ನಾಗಭೂಷಣ್, ರಮೇಶ್ ಹಾಗೂ ಗ್ರಾಮಸ್ಥರು ಇದ್ದರು.