ಮೌಲ್ಯಯುತ ಜೀವನಕ್ಕೆ ಮಂದಿರಗಳು ಸಹಕಾರಿ

dvg-temple_20250510010204493.jpg
Published on

ದಾವಣಗೆರೆ : ಮೌಲ್ಯಯುತ ಮತ್ತು ಆದರ್ಶಮಯ ಜೀವನ ನಡೆಸಲು ದೇವಸ್ಥಾನ, ಮಠ ಮತ್ತು ಮಂದಿರಗಳು ಸಹಕಾರಿಯಾಗಿವೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
 ನಗರದ ಶಂಕರ ವಿಹಾರ ಬಡಾವಣೆಯ ಬಿ ಬ್ಲಾಕ್‌ನಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಶ್ರೀ ಅಂಬಾಭವಾನಿ ದೇವಿ ದೇವಸ್ಥಾನ ಲೋಕಾರ್ಪಣೆ, ಶ್ರೀ ಅಂಬಾಭವಾನಿ ದೇವಿ, ಶ್ರೀ ವರಸಿದ್ಧಿ ವಿನಾಯಕ ಮತ್ತು ಶ್ರೀ ಗುರು ದತ್ತಾತ್ರೇಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿದರು.
 ದೇವಸ್ಥಾನದ ಮೇಲಿನ ಗೋಪುರ ದರ್ಶನದಿಂದ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಕಳಸದಿಂದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ದರ್ಶನವಾಗುತ್ತದೆ. ಗೋಪುರ ಮತ್ತು ಕಳಶವನ್ನು ಪ್ರತಿ ನಿತ್ಯ ದರ್ಶನ ಮಾಡುವುದರಿಂದ ಸಪ್ತ ಸಾಗರದಲ್ಲಿ ಮಿಂದು ಪಾಪ ಕಳೆದುಕೊಂಡು, ಪುಣ್ಯ ಪ್ರಾಪ್ತಿಯಾಗುವುದರ ಜತೆಗೆ ಇಚ್ಛಾ, ಕ್ರಿಯಾ ಮತ್ತು ಜ್ಞಾನ ಶಕ್ತಿ ವೃದ್ಧಿಯಾಗುತ್ತದೆ ಎಂದರು.
 ಭಗವತಿಯ ಅಪೇಕ್ಷೆಯಂತೆ ಯಾರನ್ನೂ ದ್ವೇಷಿಸದೇ, ಯಾರ ಮುಂದೆಯೂ ಕೈಯೊಡ್ಡದೇ, ಅನ್ಯರನ್ನು ನಿಂದಿಸದೇ ಕಾಯಕ ನಿಷ್ಠೆ ಮತ್ತು ಗುರು-ಹಿರಿಯರ ಬಗ್ಗೆ ಭಕ್ತಿ ಹೊಂದುವ ಮೂಲಕ ದೀನ-ದುರ್ಬಲರಿಗೆ ಕೈಲಾದ ಸಹಾಯ ಮಾಡಬೇಕು. ದಾವಣಗೆರೆಯಲ್ಲಿ ಪ್ರಸನ್ನಳಾಗಿರುವ ಅಂಬಾಭವಾನಿ ಎಲ್ಲರಿಗೂ ಕಾರುಣ್ಯ ನೀಡಲಿ ಎಂದು ಶುಭ ಹಾರೈಸಿದರು.
 ಕಾರ್ಯಕ್ರಮ ಉದ್ಘಾಟಿಸಿದ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಪಾಕಿಸ್ತಾನದೊಂದಿಗೆ ಹೋರಾಡುತ್ತಿರುವ ಭಾರತದ ಸೈನಿಕರೊಂದಿಗೆ ಪ್ರತಿ ಪ್ರಜೆಯೂ ಇದ್ದು, ದೇಶಕ್ಕೆ ಹಿರಿಮೆ ತರುವ ಶಕ್ತಿಯನ್ನು ಆ ದೇವಿ ಅಂಬಾಭವಾನಿ ಕರುಣಿಸಲಿ ಎಂದರು.
 ಪಾಕಿಸ್ತಾನಕ್ಕೆ ಸಂಸ್ಕೃತಿಯ ಗಂಧವೇ ಗೊತ್ತಿಲ್ಲ. ಹಾಗಾಗಿ ಅದು ಸದಾ ಯುದ್ಧೋನ್ಮಾದದಲ್ಲಿ ಇರುತ್ತದೆ. ಹಾಗಾಗಿ, ಪಾಕಿಸ್ತಾನಿಗಳಿಗೂ ಸ್ವಾಮೀಜಿಗಳಿಂದ ಪ್ರವಚನ ಕೊಡಿಸುವ ಮೂಲಕ ಅವರ ಮನಸ್ಸು ಪರಿವರ್ತನೆ ಆಗಬಹುದು. ಇಂಥ ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆ ತಂದು, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಬಗ್ಗೆ ತಿಳಿಸಬೇಕು ಎಂದು ಹೇಳಿದರು.
 ಎಸ್‌ಎಸ್‌ಕೆ ಸಮಾಜದಿಂದ ಸಿಎ ನಿವೇಶನಕ್ಕೆ ಅರ್ಜಿ ಹಾಕಿದರೆ, ದೂಡಾದಿಂದ ಕಡಿಮೆ ದರದಲ್ಲಿ ನಿವೇಶನ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
 ಮಾಜಿ ಶಾಸಕ ಅಶೋಕ ಕಾಟ್ವೆ ಮಾತನಾಡಿ, ದಾವಣಗೆರೆಯ ಎಸ್‌ಎಸ್‌ಕೆ ಸಮಾಜವು ನಾಲ್ಕು ವರ್ಷದ ಅವಧಿಯಲ್ಲಿಯೇ ದೊಡ್ಡ ದೇವಸ್ಥಾನ ನಿರ್ಮಿಸಿರುವುದು ಸಾಮಾನ್ಯ ಕೆಲಸವಲ್ಲ. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ದೇಶದಲ್ಲಿ ನಯಾ ಪೈಸೆ ವರಕ್ಷಿಣೆ ಇಲ್ಲದ ಯಾವುದಾದರೂ ಸಮಾಜ ಇದ್ದರೆ ಅದು ಎಸ್‌ಎಸ್‌ಕೆ ಸಮಾಜ ಎಂದು ಹರ್ಷ ವ್ಯಕ್ತಪಡಿಸಿದರು.
 ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಬಾಲಯೋಗಿ ಶ್ರೀ ಜಗದೀಶ್ವರ ಸ್ವಾಮೀಜಿ ಮಾತನಾಡಿ, ಕಾಶ್ಮೀರದ ಯುದ್ಧದ ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸುತ್ತಿರುವ ವೈಷ್ಣೋದೇವಿಯೇ ಅಂಬಾಭವಾನಿ ರೂಪದಲ್ಲಿ ವಿರಾಜಮಾನವಾಗಿರುವ ಭಾವ ಮೂಡಿತು. ಭಕ್ತಿಯಿಂದ ಕೈ ಮುಗಿದರೆ ದೇವಿಯು ಭಕ್ತರ ಕಷ್ಟ ನಿವಾರಿಸುತ್ತಾಳೆ ಎಂದು ಹೇಳಿದರು.
 ಶ್ರೀ ಕ್ಷೇತ್ರ ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್.ಎಸ್.ಕೆ ಸಮಾಜದ ಮಲ್ಲಾರಸಾ ಆರ್ ಕಾಟ್ವೆ, ಪ್ರಧಾನ ಕಾರ್ಯದರ್ಶಿ ರಾಮಚಂದ್ರಸಾ ಕಬಾಡೆ, ಸತೀಶ್ ಜಿ. ಮೆಹರವಾಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net