ಗ್ರಾಮದೇವತೆ ದೇವಸ್ಥಾನದ ಲೋಕಾರ್ಪಣೆ

IMG-20250427-WA0002.jpg
Published on

ದಾವಣಗೆರೆ :  ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದೇವತೆ ಊರಮ್ಮದೇವಿ ದೇವಸ್ಥಾನದ ಲೋಕಾರ್ಪಣೆ ಮತ್ತು ದೇವತೆಯ ನೂತನ ದೇವಾಲಯಕ್ಕೆ ಸ್ಥಳಾಂತರ ಹಾಗೂ ಕಳಸಾರೋಹಣ ಅಂಗವಾಗಿ ಸೋಮವಾರದಿಂದ ಏ. 30 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಹದಡಿ ಯಲ್ಲಪ್ಪ ಹೇಳಿದರು.  ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ದೇವಿಯೊಂದಿಗೆ ಗ್ರಾಮ ದೇವರುಗಳನ್ನು ಒಡಗೂಡಿ, ಗಂಗಾಪೂಜೆ, ರಾತ್ರಿ 7.30ಕ್ಕೆ ಯಾಗ ಮಂಟಪದಿಂದ ದೇವಿಯ ಪ್ರವೇಶ ಆಗಲಿದೆ ಎಂದು ತಿಳಿಸಿದರು.  ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ನವಗ್ರಹ ಆರಾಧನೆ, ವಾಸ್ತು ಪೂಜೆ, ದಿಕ್ಪಾಲಕರ ಪೂಜೆ, ಸಂಜೆ 4.30 ರಿಂದ ಹೋಮ, ಹವನ, ವಾಸ್ತುಪೂಜೆ, ಗಣ ಹೋಮ, ಲಘು ಚಂಡಿಕಾ ಹೋಮ, ದುರ್ಗಾ ಹೋಮ, ರಾತ್ರಿ 9 ಗಂಟೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.  ಬುಧವಾರ ಬೆಳಗ್ಗೆ 5.30 ರಿಂದ ಶ್ರೀ ದೇವಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಬೆಳಗ್ಗೆ 10.20 ರಿಂದ 10.55 ರ ವರೆಗೆ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗ್ರಾಮದೇವತೆ ಊರಮ್ಮ ದೇವಿಯ ನೂತನ ದೇವಸ್ಥಾನ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಅರಕೇರಮ್ಮ ದೇವಸ್ಥಾನಗಳ ಕಳಸಾರೋಹಣ ನೆರವೇರಲಿದೆ ಎಂದು ಮಾಹಿತಿ ನೀಡಿದರು.  ಏ. 30 ರಂದು ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು. ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಸೇರಿ ಅನೇಕ ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳುವರು ಎಂದು ವಿವರಿಸಿದರು.  ಗ್ರಾಮದ ಮುಖಂಡರಾದ ಕೆ.ಜಿ. ಬಸವನಗೌಡ್ರು, ಆರ್.ಡಿ. ಕುಲಕರ್ಣಿ, ಮಹಾಂತೇಶ ಗೌಡ್ರು, ಎಂ. ನಾಗರಾಜ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net