

ದಾವಣಗೆರೆ : ತಾಲೂಕಿನ ಹಳೇ ಕುಂದುವಾಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆಂಜನೇಯ ಸ್ವಾಮಿ ಮತ್ತು ಬಸವೇಶ್ವರ ದೇಗುಲಗಳ ಲೋಕಾರ್ಪಣೆ, ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಫೆ. 17 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮೇಯರ್ ಎಚ್.ಎನ್. ಗುರುನಾಥ್ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಸ್ಥಾನ ಉದ್ಘಾಟನೆಯ ಅಂಗವಾಗಿ ಗುರುವಾರದಿಂದ ಫೆ. 17ರ ವರೆಗೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಗೋಪೂಜೆ, ವಾಸ್ತುಪೂಜೆ, ಪಂಚಗವ್ಯಾಧಿವಾಸ, ಪುಣ್ಯಾಹವಾಚನ, ಮಂತ್ರಪುಷ್ಪ ಸೇರಿ ನಿತ್ಯವೂ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ ಎಂದು ತಿಳಿಸಿದರು. ಎರಡು ದೇಗುಲಗಳನ್ನು ಅಂದಾಜು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ತಮಿಳುನಾಡಿನ ಕಲಾವಿದರಾದ ಎಸ್.ವಡಿವೇಲು ಹಾಗೂ ಕೆ.ಆರ್.ಮಾರಿಯಪ್ಪನ್ ನಿರ್ಮಿಸಿದ್ದಾರೆ. ಮೈಸೂರಿನ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್ ವಿಗ್ರಹ ಕೆತ್ತನೆ ಮಾಡಿದ್ದಾರೆ. ಫೆ. 17ರಂದು ಬೆಳಗ್ಗೆ 11ಕ್ಕೆ ಧರ್ಮಸಭೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ದೇಗುಲ ಲೋಕಾರ್ಪಣೆ ಮಾಡಲಿದ್ದಾರೆ ಎಂದು ವಿವರಿಸಿದರು. ತರಳಬಾಳು ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ, ಹರಿಹರದ ವಚನಾನಂದ ಸ್ವಾಮೀಜಿ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿ ನಾಡಿನ ಹಲವು ಮಠಾಧೀಶರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಪಾಲ್ಗೊಳ್ಳಲಿದ್ದಾರೆ ಎಂದರು. ದೇಗುಲ ನಿರ್ಮಾಣ ಕಾರ್ಯ ಎಂಟು ವರ್ಷ ನಡೆದಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇಗುಲಕ್ಕೆ ಸರ್ಕಾರದ ಅನುದಾನ ಸಿಕ್ಕಿಲ್ಲ. ಭಕ್ತರು ಹಲವು ರೀತಿಯಲ್ಲಿ ಸಹಕಾರ ನೀಡಿದ್ದರಿಂದ ಇದು ಸಾಧ್ಯವಾಗಿದೆ ಎಂದು ಬಸವ ಆಂಜನೇಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಜಿ.ಗಣೇಶಪ್ಪ ತಿಳಿಸಿದರು. ಗ್ರಾಮದ ಮುಖಂಡರಾದ ಎಚ್.ಜಿ.ಮಂಜಪ್ಪ, ಜೆ.ಎನ್.ಮಾರುತಿ, ಯು.ಡಿ.ಶ್ರೀನಿವಾಸ್, ಎಚ್.ಪಿ.ಅಣ್ಣಪ್ಪ, ಬಸವರಾಜಪ್ಪಗೌಡ, ದೊಡ್ಡಪ್ಪ, ಮಧು ನಾಗರಾಜ್ ಇದ್ದರು.