

ರಮೇಶ ಜಹಗೀರದಾರ್ ದಾವಣಗೆರೆ : ದೇವಸ್ಥಾನಗಳಲ್ಲಿ ಪೂಜೆ, ಅಲಂಕಾರಕ್ಕೆ ಬಳಸಿದ ಹೂವುಗಳನ್ನು ಮರುದಿನ ವಿಲೇವಾರಿ ಮಾಡುವುದು ಒಂದು ಸವಾಲು. ‘ನಿರ್ಮಾಲ್ಯ’ ವಿಸರ್ಜನೆಯ ನಂತರ ಅದನ್ನು ಗೊಬ್ಬರವಾಗಿ ಪರಿವರ್ತಿಸುವ ವ್ಯವಸ್ಥೆಯನ್ನು ದಾವಣಗೆರೆಯ ಪರಿವರ್ತನಾ ವೇದಿಕೆಯ ಕಾರ್ಯಕರ್ತರು ನಗರದ 20 ದೇಗುಲಗಳಲ್ಲಿ ಪರಿಚಯಿಸಿ ಯಶಸ್ಸು ಕಂಡಿದ್ದಾರೆ. ಎರಡು ವರ್ಷಗಳ ಹಿಂದೆ ಈ ಪ್ರಯತ್ನ ಆರಂಭವಾಯಿತು. ಸುಮಾರು 15 ದೇವಸ್ಥಾನಗಳಿಗೆ ವೇದಿಕೆಯಿಂದ ಬಿನ್‌ಗಳನ್ನು ಪೂರೈಸಿ, ಅರ್ಚಕರಿಗೆ ಮಾಹಿತಿ ನೀಡಲಾಯಿತು. ಜತೆಗೆ ಕಾಂಪೋಸ್ಟ್ ಕಲ್ಚರ್ ಪುಡಿಯನ್ನೂ ಒದಗಿಸಲಾಯಿತು. ರಿಂಗ್ ರಸ್ತೆಯ ಶಾರದಾಂಬಾ ದೇವಸ್ಥಾನ, ಶಾಮನೂರು ರಸ್ತೆಯ ಗಣಪತಿ ಮತ್ತು ವೀರಭದ್ರ ದೇವರ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇಗುಲ, ಡಿಸಿಎಂ ಲೇಔಟ್‌ನ ವಾಸವಿ, ಬನಶಂಕರಿ ದೇವಸ್ಥಾನ, ರಾಂ ಆ್ಯಂಡ್ ಕೋ ವೃತ್ತ, ಚಾಮರಾಜ ಪೇಟೆ, ಭಗತ್‌ಸಿಂಗ್ ನಗರ, ಆಂಜನೇಯ ಬಡಾವಣೆಯಲ್ಲಿರುವ ವಿವಿಧ ದೇವಸ್ಥಾನಗಳಲ್ಲಿ ಈ ಪರಿಸರಸ್ನೇಹಿ ಕಾರ್ಯ ಮೌನವಾಗಿ ನಡೆಯುತ್ತ ಬಂದಿದೆ. ಕ್ರಮೇಣ ಇನ್ನುಳಿದ ದೇಗುಲಗಳಿಗೆ ವಿಸ್ತರಿಸುವ ಉದ್ದೇಶ ವೇದಿಕೆಗಿದೆ. ಮನೆಗಳ ಕೈತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಭೆಯನ್ನು ಕರೆದು, ಅವರಿಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸದ್ಯದಲ್ಲೇ ಹಮ್ಮಿಕೊಳ್ಳಲು ವೇದಿಕೆ ಉದ್ದೇಶಿಸಿದೆ. ಹೂವು, ಅಲಂಕಾರಿಕ ಗಿಡಗಳ ಜತೆಗೆ ತರಕಾರಿ ಬೆಳೆಯುವಂತೆ ಅವರಿಗೆ ತಿಳಿ ಹೇಳಲಾಗುವುದು ಎಂದು ಪರಿವರ್ತನಾ ವೇದಿಕೆಯ ಅಧ್ಯಕ್ಷೆ ಡಾ. ಶಾಂತಾ ಭಟ್ ತಿಳಿಸಿದರು. ರಾಸಾಯನಿಕಯುಕ್ತ ಗೊಬ್ಬರ ಬಳಸುವುದಕ್ಕಿಂತ ಈ ರೀತಿ ನೈಸರ್ಗಿಕ ವಿಧಾನದಲ್ಲಿ ಸಿದ್ಧಪಡಿಸಿದ ಗೊಬ್ಬರ ಬಳಸುವುದು ನಮ್ಮ ಪರಿಸರಕ್ಕೆ ಒಳ್ಳೆಯದು, ಜತೆಗೆ ಆರೋಗ್ಯದ ದೃಷ್ಟಿಯಿಂದಲೂ ಸೂಕ್ತವಾಗಿದೆ ಎಂದು ಅವರು ಹೇಳಿದರು. ಪರಿವರ್ತನಾ ವೇದಿಕೆಯು 50 ಜನ ಸದಸ್ಯರನ್ನು ಹೊಂದಿದ್ದು ಪರಿಸರ ಪೂರಕವಾದ ಅನೇಕ ಕೆಲಸಗಳನ್ನು ಮಾಡುತ್ತ ಬಂದಿದೆ. ... (ಬಾಕ್ಸ್) ಗೊಬ್ಬರವಾಗಿಸುವ ವಿಧಾನ ದೇವಸ್ಥಾನಗಳಲ್ಲಿ ಉಪಯೋಗಿಸುವ ಸೇವಂತಿಗೆ, ಕಾಕಡಾ, ದಾಸವಾಳ ಇನ್ನಿತರ ಹೂವುಗಳು, ತುಳಸಿ, ಮಾವಿನ ಎಲೆ, ವೀಳ್ಯದೆಲೆ ಮುಂತಾದ ಪದಾರ್ಥಗಳನ್ನು ಅರ್ಚಕರು ಅಥವಾ ದೇವಸ್ಥಾನದ ಸಿಬ್ಬಂದಿ ಕಾಂಪೋಸ್ಟ್ ಬಿನ್‌ಗೆ ಹಾಕಿ, ಅದರ ಮೇಲೆ ಕಾಂಪೋಸ್ಟ್ ಕಲ್ಚರ್ ಪುಡಿಯನ್ನು ಹಾಕಿ ಇಡುತ್ತಾರೆ. ವೇದಿಕೆಯ ಕಾರ್ಯಕರ್ತರು ವಾರಕ್ಕೊಮ್ಮೆ ದೇಗುಲಗಳಿಗೆ ಹೋಗಿ, ಕಾಂಪೋಸ್ಟ್ ಬಿನ್‌ನಲ್ಲಿ ಸಂಗ್ರಹವಾಗಿದ್ದನ್ನು ತರುತ್ತಾರೆ. ವೇದಿಕೆಯ ವತಿಯಿಂದ ಎಸ್‌ಎಸ್ ಲೇಔಟ್‌ನಲ್ಲಿರುವ ಬಸಣ್ಣನ ದೇವಸ್ಥಾನದ ಬಳಿ ಮತ್ತು ಆಶಾಕಿರಣ ಟ್ರಸ್ಟ್ ಸಮೀಪದಲ್ಲಿ ಇಟ್ಟಿರುವ ದೊಡ್ಡ ಬಿನ್‌ಗಳಿಗೆ ಅದನ್ನು ಸುರಿಯಲಾಗುತ್ತದೆ. ಎರಡು ತಿಂಗಳಿಗೊಮ್ಮೆ ಅದನ್ನು ತೆಗೆದು ಪಾಕೆಟ್‌ಗಳಿಗೆ ತುಂಬಿ ಸ್ಥಳೀಯ ನಿವಾಸಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಮನೆಯ ಸುತ್ತಮುತ್ತ ಬೆಳೆದ ಗಿಡಗಳಿಗೆ ಈ ಗೊಬ್ಬರವನ್ನು ಬಳಸಲಾಗುತ್ತದೆ. ಸಸ್ಯಸಂತೆ, ಸ್ವದೇಶಿ ಮೇಳದಂಥ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ. ಭಾನುವಾರ, ಹಬ್ಬಗಳು, ಶ್ರಾವಣ ಮಾಸ ಇನ್ನಿತರ ಸಂದರ್ಭಗಳಲ್ಲಿ ಹೆಚ್ಚು ಹೂವುಗಳಿರುತ್ತವೆ. ಅವುಗಳನ್ನು ಕಾಂಪೋಸ್ಟ್ ಬಿನ್‌ಗಳಿಗೆ ಹಾಕುವಾಗ ಊದುಬತ್ತಿ, ತೆಂಗಿನಚಿಪ್ಪು, ಹಾಲಿನ ಕವರ್‌ಗಳೂ ನುಸುಳುವ ಸಾಧ್ಯತೆ ಇರುತ್ತವೆ. ಅವುಗಳನ್ನು ಬೇರ್ಪಡಿಸಲಾಗುತ್ತದೆ. ... (ಕೋಟ್) ದಾವಣಗೆರೆಯ 20 ದೇವಸ್ಥಾನಗಳಲ್ಲಿ ಈ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ನಗರದ ಎಲ್ಲ ದೇವಸ್ಥಾನಗಳಿಗೂ ವಿಸ್ತರಿಸುವ ಚಿಂತನೆಯಿದೆ. ದೇವಸ್ಥಾನದವರು ಪೂಜೆಗೆ ಬಳಸಿದ ಹೂವುಗಳನ್ನು ನದಿಗೋ, ಕಾಲುವೆಗೋ ಹಾಕುತ್ತಾರೆ. ಅದರ ಬದಲು ಗೊಬ್ಬರ ಮಾಡುವುದರಿಂದ ಉಪಯೋಗವಾಗುತ್ತದೆ. ಇಂಥ ಗೊಬ್ಬರವನ್ನು ಬಳಸಲು ಸಾರ್ವಜನಿಕರಿಗೂ ದೈವಿಕ ಭಾವನೆ ಬರುತ್ತದೆ. ಡಾ. ಶಾಂತಾ ಭಟ್, ಪರಿವರ್ತನಾ ವೇದಿಕೆ ಅಧ್ಯಕ್ಷೆ ಚಿತ್ರ: ಡಿವಿಜಿ ಡಾ. ಶಾಂತಾ ಭಟ್