

ಮಾಯಕೊಂಡ : ದೇಗುಲಗಳು ಭಕ್ತಿ ಹಾಗೂ ಮನಃಶಾಂತಿಯ ತಾಣಗಳಾಗಿವೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ವಿ.ಜಿ. ರುದ್ರೇಶ್ ಅಭಿಪ್ರಾಯಪಟ್ಟರು. ಹೋಬಳಿಯ ಹುಚ್ಚವ್ವನಹಳ್ಳಿ ಹೊರವಲಯದಲ್ಲಿ ನಿರ್ಮಾಣವಾಗಲಿರುವ ಆಂಜನೇಯ ದೇವಾಲಯದ ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ಪೂರ್ವಿಕರ ಕಾಲದಲ್ಲಿ ಗ್ರಾಮೀಣ ಜನರು ಹಬ್ಬ ಹರಿದಿನಗಳ ಆಚರಣೆ, ಮನೆಗಳಲ್ಲಿ ಪುರಾಣ, ಪುಣ್ಯ ಕಥೆಗಳ ಪಾರಾಯಣದ ಮೂಲಕ ದೇವರಲ್ಲಿ ಭಕ್ತಿ ಹೊಂದಿದ್ದರು. ಈಗಿನ ದಿನಗಳಲ್ಲಿ ಭಕ್ತಿ ಮಾಯವಾಗುತ್ತಿದ್ದು, ಹಬ್ಬ ಹರಿದಿನಗಳ ಆಚರಣೆ ಕಡಿಮೆಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು. ದೇಗುಲ ನಿರ್ಮಾಣ, ದೇವರ ಪ್ರತಿಷ್ಠಾಪನೆ, ಧಾರ್ಮಿಕ ಆಚರಣೆಗಳು ಮಾನವನ ಮನಃಶಾಂತಿಗೆ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ಹಳೆ ದೇವಾಲಯವನ್ನು ನೆಲಸಮಗೊಳಿಸಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನೂತನ ಆಂಜನೇಯ ಸ್ವಾಮಿ ದೇವಾಲಯ ಹಾಗೂ ಗೋಪುರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಒಂದು ವರ್ಷದೊಳಗೆ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಎಪಿಎಂಸಿ ಮಾಜಿ ಸದಸ್ಯೆ ಸುಧಾ ರುದ್ರೇಶ್, ಮಂಜುನಾಥ್, ಪ್ರಾಥಮಿಕ ಶಾಲೆಗಳ ತಾಲೂಕು ಪೋಷಕ ಸಮಿತಿ ಮಾಜಿ ಅಧ್ಯಕ್ಷ ಎಸ್. ರವಿಕುಮಾರ್, ಯುವ ಉದ್ಯಮಿ ಕೆ.ಜಿ. ಕಂಬರಾಜ್, ಮುಖಂಡರಾದ ಎಚ್.ಬಿ. ಸದಾಶಿವ್, ವಿ. ವೀರೇಶ್, ವಿ. ರಮೇಶ್, ಬಿ. ಕರಿಯಪ್ಪ, ದಯಾನಂದ, ಶಶಿಧರ್, ವಿ.ಆರ್. ಪುನೀತ್, ಕಿಶೋರ್ ಇತರರಿದ್ದರು.