

ದಾವಣಗೆರೆ : ಜಾತಿ ಗಣತಿ ಗೊಂದಲದಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರು ಗುರುವಾರ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಪಾಲಿಕೆ ಆವರಣದಲ್ಲಿ ಜಮಾಯಿಸಿದ ಶಿಕ್ಷಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್ ಮತ್ತು ಶಿಕ್ಷಕರ ನಡುವೆ ಮಾತಿನ ಚಕಮಕಿ ನಡೆಯಿತು. ನಗರದಲ್ಲಿ ನಮಗೆ ನೀಡಿರುವ ಗುರಿಯಂತೆ ಈಗಾಗಲೇ ಸಮೀಕ್ಷೆ ಮುಗಿಸಿದ್ದೇವೆ. ಮನೆಗಳನ್ನು ಹುಡುಕುವುದು ದೊಡ್ಡ ಸಮಸ್ಯೆಯಾಗಿದೆ. ನಮಗೆ ಹೊಸ ಪ್ರದೇಶ ನೀಡುವ ಬದಲು ಈ ಹಿಂದೆ ನೀಡಿದ್ದ ಕಡೆಗೇ ಅವಕಾಶ ಮಾಡಿಕೊಟ್ಟರೆ ಮೂರ್ನಾಲ್ಕು ದಿನಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು. ವಾಣಿಜ್ಯ ಮಳಿಗೆ, ವ್ಯಾಪಾರಸ್ಥರು ಜಾಸ್ತಿ ಇರುವ ಪ್ರದೇಶದಲ್ಲಿ ಸಮಸ್ಯೆ ಎದುರಿಸುತ್ತಿದ್ದೇವೆ. ಅಲ್ಲಿರುವ ಅನ್ಯ ರಾಜ್ಯದ ವ್ಯಾಪಾರಸ್ಥರ ಬಳಿ ಆಧಾರ್ ಕಾರ್ಡ್ ಇಲ್ಲ. ಎಲ್ಲೋ ಇರ್ತಾರೆ, ಒಟಿಪಿ ಹೇಳುವುದಿಲ್ಲ. ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎನ್ನುತ್ತಾರೆ. ಕೆಲವರು ಮಾಹಿತಿ ನೀಡಲು ನಿರಾಕರಿಸುತ್ತಾರೆ ಎಂದು ದೂರಿದರು. ಮನೆಗಳ ಪಟ್ಟಿ ಸಿದ್ಧಪಡಿಸಿ ಸಮೀಕ್ಷೆಯ ಪ್ರದೇಶವನ್ನು ನಿಗದಿಪಡಿಸಿಲ್ಲ. ಗಣತಿಯಿಂದ ಯಾವಾಗ ಮುಕ್ತರಾಗುತ್ತೇವೆಯೋ ಎನ್ನುವಂತಾಗಿದೆ. ಬೆಸ್ಕಾಂನವರ ಸಹಕಾರ ಹೆಚ್ಚಾಗಿ ಬೇಕಿದೆ ಎಂದರು. ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಇದ್ದರು.