ಡಾ. ಎಂ.ಜಿ. ಈಶ್ವರಪ್ಪ ಅವರಿಗೆ ನುಡಿನಮನ

IMG-20240607-WA0133.jpg
Published on

ದಾವಣಗೆರೆ: ಪ್ರತಿಮಾ ಸಭಾದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಜೂ.9 ರಂದು ಸಾಹಿತಿ ಡಾ. ಎಂ.ಜಿ.ಈಶ್ವರಪ್ಪ ಅವರಿಗೆ ನುಡಿನಮನ ಹಮ್ಮಿಕೊಳ್ಳಲಾಗಿದೆ ಎಂದು ಸಭಾದ ಕೋಶಾಧ್ಯಕ್ಷ ಬಿ.ಎನ್. ಮಲ್ಲೇಶ್ ಹೇಳಿದರು.
 ಭಾನುವಾರ ಬೆಳಗ್ಗೆ 11 ಗಂಟೆಗೆ ಸಭಾದ ಸ್ಥಾಪಕ ಅಧ್ಯಕ್ಷ ಪ್ರೊ.ಎಸ್. ಹಾಲಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ ಕಪ್ಪಣ್ಣ, ಕಾದಂಬರಿಕಾರ ಕುಂ. ವೀರಭದ್ರಪ್ಪ, ಪ್ರತಿಮಾ ಸಭಾ ಸಂಸ್ಥಾಪಕ ನಿರ್ದೇಶಕ ಪ್ರೊ.ಜಿ.ಎನ್. ಸತ್ಯಮೂರ್ತಿ ನುಡಿನಮನ ಸಲ್ಲಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಬಸಮ್ಮ ಡಾ.ಎಂ.ಜಿ. ಈಶ್ವರಪ್ಪ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಉಪಸ್ಥಿತರಿರುವರು. ಡಾ.ಕೃಷ್ಣಮೂರ್ತಿ ಹನೂರು, ಡಾ.ಬಿ. ರಾಜಶೇಖರಪ್ಪ, ಡಾ.ಜಯಪ್ರಕಾಶ್ ಮಾವಿನಕುಳಿ, ಡಾ. ಬಸವರಾಜ ನೆಲ್ಲಿಸರ ಇತರರು ಭಾಗವಹಿಸಲಿದ್ದಾರೆ ಎಂದರು.
 ಪ್ರತಿಮಾ ಸಭಾ ಮೂಲಕ ದಾವಣಗೆರೆಯಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಡಾ.ಎಂ.ಜಿ. ಈಶ್ವರಪ್ಪ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಾಹಿತ್ಯ, ನಾಟಕ, ಜಾನಪದ ಹಾಗೂ ಸಂಸ್ಕೃತಿಯ ಅಭಿರುಚಿ ಬಿತ್ತುವ ಕೆಲಸ ಮಾಡಿದರು. ಅವರ ಅಗಲಿಕೆಯಿಂದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಶೂನ್ಯತೆ ಆವರಿಸಿದೆ ಎಂದು ಹೇಳಿದರು.
 ಸಭಾದ ಪ್ರಧಾನ ಕಾರ್ಯದರ್ಶಿ ಬಾ.ಮ. ಬಸವರಾಜಯ್ಯ ಮಾತನಾಡಿ, ರಾಜ್ಯಮಟ್ಟದಲ್ಲಿ ಪ್ರತಿಮಾ ಸಭಾ ದೊಡ್ಡ ಹೆಸರು ಪಡೆಯಲು ಎಂ.ಜಿ. ಈಶ್ವರಪ್ಪ ಕಾರಣ. ಮುಂದಿನ ದಿನಗಳಲ್ಲಿ ಅವರ ಹೆಸರಿನಲ್ಲಿ ನಾಟಕೋತ್ಸವ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
 ಎಸ್.ಎಸ್. ಸಿದ್ದರಾಜು, ಎನ್.ಟಿ. ಮಂಜುನಾಥ್, ಶಂಭಣ್ಣ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net