

ದಾವಣಗೆರೆ : ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬುಳ್ಳಾಪುರ ಗುಡ್ಡದಲ್ಲಿರುವ ಕೆರೆ ಕೋಡಿ ಬಿದ್ದಿದೆ. ಅದನ್ನು ಮರು ನಿರ್ಮಿಸಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಆಗ್ರಹಿಸಿದರು. ಮಂಗಳವಾರ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಸವಂತಪ್ಪ, ಬ್ರಿಟಿಷರು ನಿರ್ಮಾಣ ಮಾಡಿದ ಬುಳ್ಳಾಪುರ ಗುಡ್ಡದಲ್ಲಿರುವ ಈ ಕೆರೆ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ. ಇದು ನೂರಾರು ಎಕರೆ ವಿಸ್ತೀರ್ಣ ಹೊಂದಿದೆ. ಕೆರೆ ಕೋಡಿ ಒಡೆದಿರುವುದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಈ ಕೆರೆಯನ್ನು ಮರು ನಿರ್ಮಾಣ ಮಾಡಿದರೆ ಈ ಭಾಗದ 45ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಒದಗಿಸಬಹುದು. ಕಾಡು ಪ್ರಾಣಿಗಳ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಈ ಬಗ್ಗೆ ನೀರಾವರಿ ಇಲಾಖೆ ಸಚಿವರು ಗಮನ ಹರಿಸಬೇಕೆಂದು ಮನವಿ ಮಾಡಿದರು. ಬಸವಾಪಟ್ಟಣ, ಹುಣಸೆಕಟ್ಟೆ, ಕದರಪ್ಪನಹಟ್ಟಿ ಸೇರಿ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿ ಅತಿ ಹೆಚ್ಚು ಕೆರೆಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದರು. ಬಸವಂತಪ್ಪ ಪ್ರಶ್ನೆಗೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಭೋಸರಾಜು, ಅರಣ್ಯ ಇಲಾಖೆಯವರು ನಮಗೆ ಭೂಮಿಯನ್ನು ಹಸ್ತಾಂತರ ಮಾಡಿದರೆ ಆ ಕೆರೆಯನ್ನು ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು.