

ದಾವಣಗೆರೆ : ಕನ್ನಡ ಭಾಷೆಯಲ್ಲಿ ಪ್ರೀತಿಯಿಂದ ಮಾತನಾಡುವ ಮೂಲಕ ಭಾಷಾಭಿಮಾನ ತೋರಬೇಕು. ಆಗ ಮಾತ್ರ ನಮ್ಮ ಭಾಷೆಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಪೊಲೀಸ್ ಉಪ ಅಧೀಕ್ಷಕ ಪಿ.ಬಿ. ಪ್ರಕಾಶ್ ಹೇಳಿದರು. ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ದಾವಣಗೆರೆ ದಕ್ಷಿಣ ವಿಭಾಗದಿಂದ ಎಸ್ಸೆಸ್ಸೆಲ್ಸಿ ಕನ್ನಡ ಭಾಷಾ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿರುವುದು ಶ್ಲಾಘನೀಯ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹೆಚ್ಚು ಆಸಕ್ತಿ ವಹಿಸಬೇಕು. ಇದರಿಂದ ಉನ್ನತ ಹುದ್ದೆ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ವಾಣಿಜ್ಯ ತೆರಿಗೆ ಉಪ ಆಯುಕ್ತ ಎಚ್.ಎಸ್. ಮಂಜುನಾಥ್ ಮಾತನಾಡಿ, ಕನ್ನಡವನ್ನು ಹೃದಯದಿಂದ ಪ್ರೀತಿಸಿದಾಗ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದು ಹೇಳಿದರು ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಬಹಳಷ್ಟಿದೆ. ಇದು ಕನ್ನಡ ಭಾಷೆ ಬೆಳೆಸಲು ಒಂದು ಪ್ರೇರಣೆಯಾಗಿದೆ. ಎಲ್ಲರೂ ಕನ್ನಡ ಉಳಿಸಿ ಬೆಳೆಸೋಣ ಎಂದರು. ಉದ್ಯಮಿ ಶಿವನಹಳ್ಳಿ ರಮೇಶ್ ಮಾತನಾಡಿ, ಕನ್ನಡ ಸೇವೆಗೆ ನಾವು ಸದಾ ಸಿದ್ಧ. ಇಂತಹ ಕಾರ್ಯಕ್ರಮ ಮಾಡಿದಾಗ ಕನ್ನಡದ ಕಂಪನ್ನು ಹರಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎ.ಜೆ. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕರಾದ ಬೀರಪ್ಪ, ಕೇಶವ್ ಶೇಟ್, ಸದಸ್ಯರಾದ ಮಾರುತಿ, ಪ್ರವೀಣ್ ಇತರರು ಇದ್ದರು. ಸುಮಾರು 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಂಜುಳಾ ಕರ್ಜಗಿ ಸ್ವಾಗತಿಸಿದರು, ತೆಲಗಿ ವೀರಭದ್ರಪ್ಪ ನಿರೂಪಿಸಿದರು. ಹರೀಶ್ ಪ್ರಾಸ್ತಾವಿಕ ಮಾತನಾಡಿದರು.