ಸಮಾಜ ಕಟ್ಟಲು ಶ್ರಮಿಸಿದ ಹಿರಿಯ ಜಗದ್ಗುರು

dvg-Bhakti-samarpane.jpg
Published on

ದಾವಣಗೆರೆ : ತರಳಬಾಳು ಮಠದ ಲಿಂ. ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಯಾವುದೇ ಅಡೆತಡೆಗಳು ಬಂದರೂ ಸಮಾಜ ಕಟ್ಟುವ ಕೆಲಸ ಮಾಡಿದರು ಎಂದು ಸಾಣೇಹಳ್ಳಿ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  ಸಾಣೇಹಳ್ಳಿಯಲ್ಲಿ ಸೆ. 24 ರಂದು ನಡೆಯಲಿರುವ, ಲಿಂ. ಹಿರಿಯ ಜಗದ್ಗುರುಗಳ ಶ್ರದ್ಧಾಂಜಲಿ ಸಭೆ ಹಿನ್ನೆಲೆಯಲ್ಲಿ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭಕ್ತಿ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಶಾಲಾ-ಕಾಲೇಜುಗಳನ್ನು ತೆರೆದು ಜಾತ್ಯತೀತವಾಗಿ ಎಲ್ಲ ಮಕ್ಕಳ ಶಿಕ್ಷಣಕ್ಕೆ ನೆರವಾದರು. ಇದೇ ಪರಂಪರೆಯನ್ನು ಸಾಣೇಹಳ್ಳ ಶ್ರೀಮಠ ಇಂದಿಗೂ ಅನುಸರಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಣಬೇರು ರಾಜಣ್ಣ ಅವರು, ಲಿಂ. ಹಿರಿಯ ಜಗದ್ಗುರುಗಳು ಈ ನಾಡು ಕಂಡ ಶತಮಾನದ ಶ್ರೇಷ್ಠರು. ಅವರು ಹಾಕಿಕೊಟ್ಟ ಮಾರ್ಗ ಇಂದಿಗೂ ಪ್ರಸ್ತುತವಾಗಿದೆ. ಅವರು ಸಮಾಜದ ಒಳಿತಿಗಾಗಿ ಮಾಡಿದ ಕೆಲಸಗಳು ಇಂದಿನ ಎಲ್ಲ ಮಠದ ಸ್ವಾಮಿಗಳಿಗೆ ಮಾದರಿ ಎಂದರು.  ತಮ್ಮ 60ನೇ ವರ್ಷಕ್ಕೆ ಪೀಠಕ್ಕೆ ರಾಜೀನಾಮೆ ಸಲ್ಲಿಸಿ ತ್ಯಾಗ ಮಾಡಿದ್ದು ಪ್ರಶಂಸನೀಯ. ಅವರಂತೆ ಎಲ್ಲ ಮಠಾಧೀಶರು ಬದುಕಿ-ಬಾಳಿ ತೋರಿಸಬೇಕಾಗಿದೆ. ಸಾಣೇಹಳ್ಳಿಯಲ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಅವರ ಋಣ ತೀರಿಸಬೇಕಾಗಿದೆ ಎಂದು ತಿಳಿಸಿದರು.  ಜೆ.ಆರ್. ಷಣ್ಮುಖಪ್ಪ ಮಾತನಾಡಿ, ಹಿರಿಯ ಲಿಂಗೈಕ್ಯ ಜಗದ್ಗುರುಗಳು ನಮ್ಮ ಸಮಾಜದ ಶಿಷ್ಯರನ್ನು ದುಡಿಯುವ ಶಿಷ್ಯರನ್ನಾಗಿ ಜೀವನಕ್ಕೆ ಮಾರ್ಗದರ್ಶನ ಮಾಡಿದ ಪುಣ್ಯಾತ್ಮರು. ಸಮಾಜ ಅವರ ಋಣ ತೀರಿಸಲಾಗದಷ್ಟು ಮಾಡಿ ಹೋಗಿದ್ದಾರೆ. ಈ ಪುಣ್ಯದ ಕೆಲಸದಲ್ಲಿ ಎಲ್ಲರೂ ತನು-ಮನ-ಧನಗಳನ್ನು ನೀಡಿ ಭಾಗಿಯಾಗೋಣ ಎಂದರು.  ಡಾ. ಬಸವಲಿಂಗ ಪಟ್ಟದೇವರು, ಪಾಂಡೋಮಟ್ಟಿಯ ಡಾ. ಗುರುಬಸವ ಸ್ವಾಮೀಜಿ, ವಿವಿಧ ಸ್ವಾಮೀಜಿಗಳು, ಮೆಳ್ಳೇಕಟ್ಟೆ ಸಂತೋಷ್, ಮಳ್ಳೇಕಟ್ಟೆ ಶ್ರೀನಿವಾಸ್, ಕೆ.ಬಿ. ಬಸವಲಿಂಗಪ್ಪ, ಪಲ್ಲಾಗಟ್ಟೆ ನಾಗರಾಜ್ ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net