

ದಾವಣಗೆರೆ : ವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನ, ಶ್ರೀ ವಾಸವಿ ಪೀಠಂನ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ 4ನೇ ಪೀಠಾರೋಹಣದ ಅಂಗವಾಗಿ ಜಿಲ್ಲಾ ಆರ್ಯವೈಶ್ಯ ಸಮಾಜದಿಂದ ಗುರುವಾರ ‘ಭಕ್ತಿ ಸಿಂಚನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ನಗರಕ್ಕೆ ಆಗಮಿಸಿದ ಸಮಾಜದ ಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಮುಖಂಡರು, ಸಮಾಜದವರು ಬೈಕ್ ರ‌್ಯಾಲಿ ಮೂಲಕ ಭಕ್ತಿಯಿಂದ ಸ್ವಾಗತಿಸಿದರು. ಬಾಡಾ ಕ್ರಾಸ್ ಬಳಿ ಸಮಾಜದ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ನಂತರ ರ‌್ಯಾಲಿ ಮೂಲಕ ಆವರಗೆರೆಯ ಗೋಶಾಲೆಗೆ ಬರಲಾಯಿತು. ಶ್ರೀಗಳು ಕಾಮಧೇನು ಎಂದೇ ಕರೆಯುವ ಗೋಮಾತೆಗೆ ವಸ್ತ್ರ ಸಮರ್ಪಿಸಿ, ಗೋಪೂಜೆ ನೆರವೇರಿಸಿದರು. ನಂತರ ಗೋವುಗಳಿಗೆ ಗೋಗ್ರಾಸ ನೀಡಲಾಯಿತು. ಇದೇ ವೇಳೆ ಗೋಶಾಲೆಯ ಆವರಣದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಸುಮಾರು 250 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ 20ಕ್ಕೂ ಹೆಚ್ಚು ಕಾರುಗಳು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಕೇಸರಿ ಪೇಟ ತೊಟ್ಟು, ವಾಹನಗಳಿಗೆ ‘ವೈಶ್ಯ ಪತಾಕೆ’ ಕಟ್ಟಿಕೊಂಡು, ‘ಜೈ ವಾಸವಿ ಮಾತಾ’, ‘ಜೈ ಕನ್ಯಕಾಂಬಾ’ ಎಂದು ಆರ್ಯವೈಶ್ಯ ಕುಲದೇವತೆ ಶ್ರೀ ಕನ್ಯಕಾಪರಮೇಶ್ವರಿ ಮಾತೆಯನ್ನು ಸ್ತುತಿಸುತ್ತಾ ಶಿಸ್ತಿನಿಂದ ಮುಂದೆ ಸಾಗಿದರು. ರ‌್ಯಾಲಿಯು ಆವರಗೆರೆ, ಪಿ.ಬಿ. ರಸ್ತೆ ಮೂಲಕ ಸಾಗಿ ಎ.ವಿ.ಕೆ. ಕಾಲೇಜು ರಸ್ತೆ, ರಾಂ ಆ್ಯಂಡ್ ಕೋ ವೃತ್ತ, ಚರ್ಚ್ ರಸ್ತೆ ಮೂಲಕ ನೇರ ರಿಂಗ್ ರಸ್ತೆ, ಗಡಿಯಾರ ವೃತ್ತ, ಶ್ರೀ ಶಾರದಾಂಬ ದೇವಸ್ಥಾನ ರಸ್ತೆಯ ಮೂಲಕ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣ ರಸ್ತೆಯಲ್ಲಿ ಸಾಗಿತು. ರ‌್ಯಾಲಿಯಲ್ಲಿ ಪಾಲ್ಗೊಂಡವರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಸಮಿತಿ ಹಾಗೂ ಭಕ್ತಿ ಸಿಂಚನ ಸಮಿತಿಯ ಅಧ್ಯಕ್ಷ ಆರ್.ಎಲ್. ಪ್ರಭಾಕರ್, ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್, ಕಾರ್ಯದರ್ಶಿ ಎಂ. ನಾಗರಾಜ ಗುಪ್ತ, ಆರ್ಯವೈಶ್ಯ ಮುಖಂಡರಾದ ಎಸ್.ಟಿ. ಕುಸುಮ ಶ್ರೇಷ್ಠಿ, ಡಾ. ಬಿ.ಎಸ್. ನಾಗಪ್ರಕಾಶ್, ಕೆ.ಎಸ್. ರುದ್ರಶ್ರೇಷ್ಠಿ, ಆರ್.ಜಿ. ಶ್ರೀನಿವಾಸ್ ಮೂರ್ತಿ, ಕೆ.ಎನ್. ಅನಂತರಾಮ ಶೆಟ್ಟಿ, ಎಚ್.ಟಿ. ಶ್ರೀನಿವಾಸ್, ಬಿ.ಎಚ್. ಅಶೋಕ್, ಎಸ್. ಸುನೀಲ್, ಟಿ.ಎಸ್. ಕಿರಣ್ ಕುಮಾರ್, ಕೆ.ಎಸ್. ದರ್ಶನ್, ಜೆ. ರವೀಂದ್ರ ಗುಪ್ತ, ಎಚ್. ವೆಂಕಟೇಶ್, ಡಿ.ಎಚ್. ಅಂಬಿಕಾಪತಿ ಶೆಟ್ಟಿ, ಸಾಯಿಪ್ರಸಾದ್, ಬದರಿನಾಥ್, ಟಿ. ಸುರೇಶ್ ಪಾಲ್ಗೊಂಡಿದ್ದರು. ಎಲ್ಲ ತಾಲೂಕುಗಳ ವಾಸವಿ ಸಂಘದ ಪದಾಧಿಕಾರಿಗಳು, ಸದಸ್ಯರು, ದಾವಣಗೆರೆ ಆರ್ಯವೈಶ್ಯ ಸಮಾಜದ ಎಲ್ಲ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.