ರಚನಾತ್ಮಕ ಕಾರ್ಯಗಳಿಂದ ಸಮಾಜಕ್ಕೆ ಶಕ್ತಿ

swamy.jpg
Published on

ದಾವಣಗೆರೆ : ರಚನಾತ್ಮಕ ಕಾರ್ಯಗಳಿಂದ ಸಮಾಜಕ್ಕೆ ಬಹುದೊಡ್ಡ ಶಕ್ತಿ ಪ್ರಾಪ್ತವಾಗುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ಪ್ರಸನ್ನರೇಣುಕ ವೀರಸೋಮೇಶ್ವರ ಮಹಾಸ್ವಾಮಿಗಳು ಹೇಳಿದರು.
 ತಾಲೂಕಿನ ನಾಗರಸನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ಮಾಣಗೊಂಡ ಶ್ರೀ ವೀರಭದ್ರೇಶ್ವರ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
 ಮನುಷ್ಯನಿಗೆ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಬೇಕೆಂಬ ಬಯಕೆ ಸಹಜ. ಆದರೆ, ನಿರಂತರ ಪರಿಶ್ರಮ ಹಾಗೂ ಸಾಧನೆಯಿಂದ ಮಾತ್ರ ರಚನಾತ್ಮಕ ಕಾರ್ಯಗಳು ನಡೆಯಲು ಸಾಧ್ಯ ಎಂದು ತಿಳಿಸಿದರು.
 ಶ್ರಮವಿಲ್ಲದೇ ಸಂಪತ್ತು ಬಯಸುವ ಜನ ಇಂದು ಹೆಚ್ಚಾಗಿದ್ದಾರೆ. ಶ್ರಮದಿಂದ ಗಳಿಸಿದ ಸಂಪತ್ತಿಗೆ ಬಹುದೊಡ್ಡ ಬೆಲೆಯಿದೆ. ಶ್ರಮವಿಲ್ಲದೆ ಗಳಿಸಿದ ಸಂಪತ್ತು ಶಾಶ್ವತವಾಗಿ ಉಳಿಯದು. ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಬದುಕು ಪಾವನವಾಗುತ್ತದೆ ಎಂದರು.
 ಮಾನವನ ಉಜ್ವಲ ಭವಿಷ್ಯಕ್ಕೆ ಆಹಾರ, ಆರೋಗ್ಯ ಮತ್ತು ಅಧ್ಯಾತ್ಮ ಬಹುಮುಖ್ಯ. ಮಿತ ಆಹಾರ, ಉತ್ತಮ ಆರೋಗ್ಯ ಮತ್ತು ಮಾನಸಿಕ ಶಾಂತಿಗೆ ಅಧ್ಯಾತ್ಮದ ಅರಿವು ಇರಬೇಕಾಗುತ್ತದೆ. ನಾಗರಸನಹಳ್ಳಿಯಲ್ಲಿ ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥ-ಗೋತ್ರಪುರುಷ ಶ್ರೀ ವೀರಭದ್ರೇಶ್ವರಸ್ವಾಮಿ ನೆಲೆಗೊಂಡಿರುವುದು ಎಲ್ಲರ ಸೌಭಾಗ್ಯ ಹೇಳಿದರು.
 ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ವೀರಶೈವ ಧರ್ಮದಲ್ಲಿ ಕಾಯಕ ಮತ್ತು ದಾಸೋಹಕ್ಕೆ ವಿಶೇಷ ಮಹತ್ವವಿದೆ. ತ್ಯಾಗ, ಔದಾರ್ಯಗಳಿಂದ ಮಾತ್ರ ಸಮಾಜದಲ್ಲಿ ಸತ್ಕಾರ್ಯ ನಡೆಯಲು ಸಾಧ್ಯ. ಗ್ರಾಮದ ಎಲ್ಲ ಜನರ ಪರಿಶ್ರಮದಿಂದ ಕಟ್ಟಿದ ಸಮುದಾಯ ಭವನ ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆಗೊಂಡಿರುವುದು ಹರ್ಷ ತಂದಿದೆ ಎಂದರು.
 ರಾಮಘಟ್ಟ ಪುರವರ್ಗ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೌತಿಕ ಜಂಜಾಟದ ಬದುಕಿನಲ್ಲಿ ಸಿಲುಕಿರುವ ಮನುಷ್ಯನಿಗೆ ಇಂತಹ ಧರ್ಮ ಸಮಾರಂಭಗಳು ನೆಮ್ಮದಿ ಉಂಟು ಮಾಡುತ್ತವೆ ಎಂದು ತಿಳಿಸಿದರು.
 ದೇವಸ್ಥಾನ ಕಮಿಟಿ ಅಧ್ಯಕ್ಷ ಡಿ.ಎಚ್. ವಿರೂಪಾಕ್ಷಪ್ಪ, ಕಾರ್ಯದರ್ಶಿ ಎನ್.ಸಿ. ರುದ್ರಪ್ಪ, ಖಜಾಂಚಿ ಎಂ.ಆರ್. ವೀರಭದ್ರಪ್ಪ, ಕುಕ್ಕುವಾಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಸೌಭಾಗ್ಯಮ್ಮ ಕೆ.ಎನ್. ಪಾಲಾಕ್ಷಪ್ಪ ಅತಿಥಿಗಳಾಗಿದ್ದರು.
 ಎಂ.ವಿ. ರುದ್ರೇಶ ಸ್ವಾಗತಿಸಿದರು. ಡಿ.ವಿ. ಪ್ರಕಾಶ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಂ. ಮಂಜುನಾಥ ಮತ್ತು ಎನ್.ಆರ್. ಸತೀಶ ನಿರೂಪಿಸಿದರು. ಡಿ.ಆರ್. ಧನಂಜಯ ವಂದಿಸಿದರು.
 ಕಾರ್ಯಕ್ರಮಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net