

ದಾವಣಗೆರೆ : ಪರೋಪಕಾರ ಗುಣ ಅಳವಡಿಸಿಕೊಂಡು ಸಮಾಜ ಸೇವೆ ಹಾಗೂ ಲೋಕ ಕಲ್ಯಾಣಕ್ಕಾಗಿ ಶ್ರಮಿಸಬೇಕು. ಆಗ ಮಾತ್ರ ಮಾನವ ಜನ್ಮ ಲೋಕಕ್ಕೆ ಹಬ್ಬವಾಗಲಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ತಿಳಿಸಿದರು. ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 53ನೇ ಜನ್ಮ ದಿನಾಚರಣೆ ಪ್ರಯುಕ್ತ ಮಠದ ಸಂಸ್ಕೃತ ಪಾಠ ಶಾಲಾ ಶಿಷ್ಯರು ನಗರದ ಶ್ರೀಶೈಲ ಮಠದಲ್ಲಿ ಗುರುವಾರ ಆಯೋಜಿಸಿದ್ದ ರಾಜೋಪಚಾರ ಪೂಜಾ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾನವನ ಹುಟ್ಟು ಎಂಬುದು ಹಬ್ಬವಲ್ಲ, ಅದು ದುಃಖ ಹಾಗೂ ನೋವು ಆಗಿದೆ. ಜಗತ್ತೇ ಮೆಚ್ಚುವ ಸಾಧನೆ ಮಾಡಿದ್ದಲ್ಲಿ ಮಾತ್ರ ಇವರೆಡಕ್ಕೂ ಅರ್ಥ ಬರಲಿದೆ ಎಂಬ ಮಾತನ್ನು ಕಬೀರರೂ ತಮ್ಮ ದೋಹೆಗಳಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು. ಪರಮಾತ್ಮನಲ್ಲಿ ಒಂದಾದ ಜೀವಾತ್ಮ, ಪರಮಾತ್ಮನಲ್ಲಿ ಇರುವವರೆಗೂ ಆನಂದ ಮತ್ತು ನಿತ್ಯ ಪರಿಪೂರ್ಣ ಸ್ವರೂಪಿಯಾಗಿರಲು ಸಾಧ್ಯ. ಆದರೆ ದೇವರಿಂದ ಬೇರ್ಪಟ್ಟ ನಂತರ ಆತ ಜೀವಾತ್ಮನಾಗಿ ಸಂಸಾರಿಯಾಗಿ ಎಲ್ಲ ದುಃಖಗಳನ್ನು ಅನುಭವಿಸಲು ಶಕ್ತನಾಗುತ್ತಾನೆ ಎಂದು ಹೇಳಿದರು. ಜೀವನ ಎಂಬುದು ಪುಸ್ತಕವಾಗಿದೆ. ಮೊದಲ ಮತ್ತು ಕೊನೆಯ ಪುಟಗಳು ಹುಟ್ಟು- ಸಾವು ಆಗಿವೆ. ಮಧ್ಯದ ಪುಟಗಳಲ್ಲಿ ಜನ ಮೆಚ್ಚುವ ಉತ್ತಮ ಕಾರ್ಯಗಳನ್ನೇ ತುಂಬಬೇಕು. ಬದುಕಿನ ಪ್ರತಿ ಗಳಿಗೆಯಲ್ಲೂ ಸಾರ್ಥಕ ಜೀವನ ನಡೆಸಬೇಕು ಎಂದು ಆಶಿಸಿದರು. ಬನ್ನಯ್ಯ ಶಾಸ್ತ್ರಿ, ಬಸವರಾಜ್ ಶಾಸ್ತ್ರಿ, ಬೆಳ್ಳೂಡಿ ಪ್ರಕಾಶ್, ಪರಮೇಶ್ವರಪ್ಪ, ಮುರುಗೇಶ್ ಆರಾಧ್ಯ, ಬಕ್ಕೇಶ್ ನಾಗನೂರು ಹಾಗೂ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಿದ್ದರು.