ಬಸವ ತತ್ವ ಅರಿತಿದ್ದರೆ ಪರಕೀಯರ ದಾಳಿ ಆಗುತ್ತಿರಲಿಲ್ಲ

dvg-basavalingamurthy-swamiji-aug-10.jpg
Published on

ದಾವಣಗೆರೆ :  ಬಸವ ತತ್ವ ಅರಿತು ಎಲ್ಲರೂ ಒಗ್ಗಟ್ಟಾಗಿದ್ದರೆ ಪರಕೀಯರು ದೇಶ ಪ್ರವೇಶಿಸಲು ಅವಕಾಶ ಸಿಗುತ್ತಿರಲಿಲ್ಲ ಎಂದು ಮೈಸೂರಿನ ಬಸವ ಧ್ಯಾನ ಮಂದಿರದ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಹೇಳಿದರು.  ಶ್ರಾವಣ ಮಾಸದ ಪ್ರಯುಕ್ತ ನಗರದ ವಿರಕ್ತ ಮಠದಲ್ಲಿ ಹಮ್ಮಿಕೊಂಡಿರುವ ಕಲ್ಯಾಣದಿಂದ ಉಳವಿಯಡೆಗೆ 114ನೇ ವರ್ಷದ ಪ್ರವಚನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.  12ನೇ ಶತಮಾನದಲ್ಲಿ ಬಸವಣ್ಣನವರು ಪರಕೀಯರ ದಾಳಿಯಿಂದ ಪಾರಾಗಲು ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಧಾರ್ಮಿಕ ಸಂಸ್ಕಾರ ನೀಡಿ ಆರ್ಥಿಕವಾಗಿ ಪ್ರಬಲರನ್ನಾಗಿಸಿದರು. ಆದರೆ, ಅವರನ್ನು ಯಾರು ಅರ್ಥ ಮಾಡಿಕೊಳ್ಳಲಿಲ್ಲ ಎಂದು ವಿಷಾದಿಸಿದರು.  ಈ ನೆಲದ ಅಭಿವೃದ್ಧಿಗಾಗಿ ಬಸವಣ್ಣನವರ ಕ್ರಾಂತಿಯಿತ್ತು. ಇಲ್ಲಿನ ಮೂಲಭೂತವಾದಿಗಳು ಅವರ ಆರ್ಥಿಕ ಹಾಗೂ ಸಾಮಾಜಿಕ ಕ್ರಾಂತಿ ತಪ್ಪಾಗಿ ಗ್ರಹಿಸಿ ಗಡಿಪಾರು ಮಾಡಿದರು. ಆನಂತರ ಪರಕೀಯರು ಈ ದೇಶದ ಮೇಲೆ ದಾಳಿ ನಡೆಸಿ ಸಂಪತ್ತನ್ನು ದೋಚಿ ಈ ನಾಡನ್ನು ಖಾಲಿ ಮಾಡಿದರು ಎಂದು ತಿಳಿಸಿದರು.  ಬಸವಣ್ಣ ಅವರಿಗೆ ಹರಕಿಯರ ಆಕ್ರಮಣ ಮೊದಲೇ ತಿಳಿದಿತ್ತು. ವಚನಗಳ ಮೂಲಕ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು. ಎಲ್ಲ  ಸಮುದಾಯದವರು ಹಾಗೂ ಕಾಯಕದವರನ್ನು ಒಗ್ಗೂಡಿಸಿ ನಾಡನ್ನು ಉಳಿಸಿಕೊಳ್ಳಬೇಕು ಎಂಬ ಹಂಬದಲ್ಲಿರುವಾಗ ಜಾತಿವಾದಿಗಳ ಕೆಟ್ಟ ದೃಷ್ಟಿಗೆ ಗಡಿ ಪಾರಾಗಬೇಕಾಯಿತು ಎಂದರು.  ಸ್ವಾತಂತ್ರೃ ಪೂರ್ವದಲ್ಲಿ 5 ನೂರಕ್ಕೂ ಹೆಚ್ಚು ಸಂಸ್ಥಾನಗಳು ಈ ದೇಶದಲ್ಲಿದ್ದು, ಎಲ್ಲ ರಾಜರು ಕೂಡ ಪ್ರಸಿದ್ಧರು, ಬಲಿಷ್ಠರು ಆಗಿದ್ದರು. ಆದರೆ, ಯಾರೂ ಹೆಚ್ಚು ಶಸ್ತ್ರಾಸ್ತ್ರ ಸಂಗ್ರಹ ಮಾಡಿರಲಿಲ್ಲ. ಎಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಭರತಖಂಡ ಮುನ್ನಡೆಸಿಕೊಂಡು ಹೋಗುತ್ತಿದ್ದರು. ಇದನ್ನೇ ಗಮನಿಸಿದ ಪರಕೀಯರು ರಾಜರ ಮೇಲೆ ಆಕ್ರಮಣ ಮಾಡಿದಾಗ ಎಲ್ಲರೂ ನಿಸ್ಸಾಯಕರಾದರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net