ಮೀಸಲಾತಿ ಹೋರಾಟ ಹತ್ತಿಕ್ಕುವ ಷಡ್ಯಂತ್ರ

jayamrutyunjaya-swami.jpg
Published on

ದಾವಣಗೆರೆ: ಕಾಂಗ್ರೆಸ್ ಸರ್ಕಾರ ಪಂಚಮಸಾಲಿ ಸಮಾಜದ ಶಾಸಕರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡದೆ ಮೀಸಲಾತಿ ಹೋರಾಟ ಹತ್ತಿಕ್ಕುವ ಷಡ್ಯಂತ್ರ ನಡೆಸಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಪಾದಿಸಿದರು.  ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಸ್ಪೀಕರ್ ಪಂಚಮಸಾಲಿ ಸಮಾಜದ ಶಾಸಕರ ಕೂಗಿಗೆ ಸ್ಪಂದಿಸುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿದೆ ಎಂದರು.  ಸಮಾಜದ 20 ಶಾಸಕರು ಮುಂಗಾರು ಅಧಿವೇಶನದಲ್ಲಿ ನಿಯಮದಡಿ ಮಾತನಾಡಲು ಅವಕಾಶ ನೀಡುವಂತೆ ಸ್ಪೀಕರ್‌ಗೆ ಪತ್ರ ನೀಡಿದರೂ ಒಂದು ದಿನವೂ ಮಾತನಾಡಲು ಅವಕಾಶ ನೀಡಲಿಲ್ಲ. ರಾಜ್ಯಪಾಲರಿಗೆ ದೂರು ನೀಡಿದ ನಂತರ ಕೊನೆ ಗಳಿಗೆಯಲ್ಲಿ ಅವಕಾಶ ನೀಡಿ ಅಧಿವೇಶನ ಮೊಟಕುಗೊಳಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಪಂಚಮಸಾಲಿ ಮೀಸಲಾತಿ ಹೋರಾಟ ಪ್ರಮುಖ ಕಾರಣ. ಲಿಂಗಾಯತರ ಕೊಡುಗೆ ಇದೆ ಎಂಬುದನ್ನು ಸಿಎಂ ಮರೆಯಬಾರದು. ಈ ಋಣ ತೀರಿಸಲು ಕೊನೆಯಪಕ್ಷ ಸೌಜನ್ಯಕ್ಕಾದರೂ ಮುಖ್ಯಮಂತ್ರಿ ನಮ್ಮನ್ನು ಕರೆದು ಮಾತನಾಡಬೇಕಿತ್ತು ಎಂದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಬೆಳಗಾವಿಯ ಅಧಿವೇಶನದಲ್ಲಿ ಪಂಚಮಸಾಲಿ ಮೀಸಲಾತಿ ಕುರಿತು ಒಂದು ವಾರದೊಳಗೆ ಸಭೆ  ಕರೆಯುವುದಾಗಿ ಹೇಳಿದ್ದರು. ಈಗಾಗಲೇ ಎಂಟು ತಿಂಗಳು ಕಳೆದರೂ ಈ ಬಗ್ಗೆ ಚಕಾರ ಎತ್ತಿಲ್ಲ. ಸಮಾಜದ ಶಾಸಕರು ಈ ಬಗ್ಗೆ ಸಿಎಂಗೆ ಒತ್ತಡ ಹೇರಬೇಕು. ಸಭೆ ನಡೆಸದಿದ್ದರೆ ನಮ್ಮ ಜತೆ ಬಹಿರಂಗವಾಗಿ ಹೋರಾಟಕ್ಕೆ ಧುಮುಕಬೇಕು ಎಂದು ತಿಳಿಸಿದರು.  ಸರ್ಕಾರ ಮೀಸಲಾತಿ ಕುರಿತು ಅಧಿವೇಶನದಲ್ಲಿ ಸರಿಯಾಗಿ ಉತ್ತರ ಕೊಡದೇ ಹೋದರೆ ಬರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಉಗ್ರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.  ನಾವೆಲ್ಲರೂ ಬಸವಣ್ಣನ ಋಣದಲ್ಲಿದ್ದೇವೆ. ಅವರ ತತ್ವಕ್ಕೆ ಅಪಚಾರ ಎಸಗುವ, ಮೂಲ ತತ್ವಕ್ಕೆ ಕೊಡಲಿಪೆಟ್ಟು ನೀಡುವ ಕೆಲಸ ಯಾರೂ ಮಾಡಬಾರದು ಎಂದು ಧರ್ಮಗಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net