ಶಾಮನೂರು ನಿವಾಸಕ್ಕೆ ಸುತ್ತೂರು ಶ್ರೀ ಭೇಟಿ

swamiji.jpg
Published on

ದಾವಣಗೆರೆ : ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಗುರುವಾರ, ಕಾಂಗ್ರೆಸ್‌ನ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ಇಲ್ಲಿನ ನಿವಾಸಕ್ಕೆ ಭೇಟಿ ನೀಡಿ 93ನೇ ಜನ್ಮದಿನದ ಶುಭಾಶಯ ಕೋರಿದರು.
 ಈ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಮನೂರು ಶಿವಶಂಕರಪ್ಪ ಈ ವಯಸ್ಸಿನಲ್ಲೂ ಬಹಳ ಉತ್ಸಾಹದಿಂದ ಇದ್ದಾರೆ. ಮನುಷ್ಯನಿಗೆ ಜೀವನದಲ್ಲಿ ಯಾವಾಗಲೂ ಉತ್ಸಾಹ ಇರಬೇಕು, ಅದು ಬಹಳ ಮುಖ್ಯ. ಶಿವಶಂಕರಪ್ಪ ಅವರು ಕೊಡುಗೈ ದಾನಿಗಳಾಗಿದ್ದಾರೆ. ಅವರಿಗೆ ಶುಭಾಶಯ ಕೋರಲು ಬಂದಿದ್ದಾಗಿ ತಿಳಿಸಿದರು.
 ಪ್ರಶ್ನೆಯೊಂದಕ್ಕೆ ಉತ್ತರಿಸಿ, ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಕೇಂದ್ರ ಸರ್ಕಾರ ಅಭಿಪ್ರಾಯಗಳನ್ನು ಕೇಳಿದೆ. ಜನರು ತಮ್ಮ ಅನಿಸಿಕೆಗಳನ್ನು ಹೇಳಲಿ. ಒಬ್ಬೊಬ್ಬರದೂ ವಿಭಿನ್ನ ಅಭಿಪ್ರಾಯಗಳಿರುತ್ತವೆ. ಯಾವುದು ಸೂಕ್ತ ಅಂತ ನೋಡಿ ನಂತರ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
 ರಾಜ್ಯ ಸರ್ಕಾರದ ಜಾತಿ ಜನಗಣತಿ ವರದಿಯ ಕುರಿತು ಪ್ರತಿಕ್ರಿಯಿಸಲು ಸ್ವಾಮೀಜಿ ನಿರಾಕರಿಸಿದರು.
 ಇದೇ ವೇಳೆ ಶಾಮನೂರು ಶಿವಶಂಕರಪ್ಪ ಅವರಿಗೆ ಸ್ವಾಮೀಜಿ ವಿಭೂತಿ ಹಚ್ಚಿ, ರುದ್ರಾಕ್ಷಿ ಸರ ಹಾಕಿ, ಮಾಲಾರ್ಪಣೆ ಮಾಡಿ ಪೇಟಾ ತೊಡಿಸಿ ಆಶೀರ್ವದಿಸಿದರು. ಕುಟುಂಬದ ಸದಸ್ಯರಾದ ಎಸ್.ಎಸ್. ಗಣೇಶ್, ರೇಖಾ, ಪ್ರಭಾ ಮಲ್ಲಿಕಾರ್ಜುನ್, ಸಮರ್ಥ, ಶಿವು ಇತರರು ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
 ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಜೆಎಸ್‌ಎಸ್ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ್ ಇದ್ದರು.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net