

ದಾವಣಗೆರೆ : ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ಕಾರ್ಯ ಅ. 7ರ ವರೆಗೆ ನಡೆಯಲಿದ್ದು, ಗಣತಿದಾರರು ಮನೆಗೆ ಬಂದಾಗ ನಾಗರಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮನವಿ ಮಾಡಿದರು. ನಗರದ ಎಸ್.ಎಸ್. ಬಡಾವಣೆ ‘ಬಿ’ ಬ್ಲಾಕ್‌ನ ಒಳಾಂಗಣ ಕ್ರೀಡಾಂಗಣದ ಮುಂಭಾಗದ ಮನೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ 4462 ಬ್ಲಾಕ್‌ಗಳಿದ್ದು, ಅಗತ್ಯತೆಗಳಿಗೆ ಅನುಗುಣವಾಗಿ ಗಣತಿದಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಸಮೀಕ್ಷೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ರೀತಿಯ ಗೊಂದಲ ಅಥವಾ ಸಮಸ್ಯೆ ಇದ್ದಲ್ಲಿ ನೋಡಲ್ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ಮಹಾನಗರ ಪಾಲಿಕೆ ಆಯುಕ್ತರು ಮತ್ತು ಕಾರ್ಯ ನಿರ್ವಾಹಕ ಅಧಿಕಾರಿಗಳ ಬಳಿ ಪರಿಹರಿಸಿಕೊಳ್ಳುವಂತೆ ತಿಳಿಸಿದರು. ಗಣತಿದಾರರು ಮನೆ ಬಳಿ ಬಂದಾಗ ಸಾಕು ನಾಯಿಗಳನ್ನು ಸುರಕ್ಷಿತವಾಗಿಟ್ಟುಕೊಂಡು ಸಮೀಕ್ಷೆಗೆ ಸಹಕರಿಸಬೇಕು, 150 ಕುಟುಂಬಗಳಿಗೆ ಒಬ್ಬ ಗಣತಿದಾರರು ಮತ್ತು 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಗಣತಿದಾರರು ಪ್ರತಿದಿನ 15 ರಿಂದ 20 ಮನೆಗಳ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲಿದ್ದು ಪ್ರತಿ ಮನೆಯ ಗಣತಿ 30 ರಿಂದ 40 ನಿಮಿಷಗಳ ಅವಧಿ ತೆಗೆದುಕೊಳ್ಳಲಿದೆ. ಜಿಲ್ಲೆಯಲ್ಲಿ ನಿಗದಿತ ಅವಧಿಗಿಂತ ಮೊದಲೇ ಸಮೀಕ್ಷಾ ವರದಿಯನ್ನು ನೀಡಲು ಗುರಿ ಹೊಂದಲಾಗಿದೆ ಎಂದರು. ಈಗಾಗಲೇ ಕುಟುಂಬಗಳ ಸಂಖ್ಯೆ ಹಾಗೂ ಬೆಸ್ಕಾಂ ಇಲಾಖೆ ಸಹಯೋಗದೊಂದಿಗೆ ಆರ್.ಆರ್. ಸಂಖ್ಯೆಗೆ ಅನುಗುಣವಾಗಿ ಚನ್ನಗಿರಿಯಲ್ಲಿ 86,897 ಕುಟುಂಬಗಳು, ದಾವಣಗೆರೆ 2,34,481, ಹರಿಹರದಲ್ಲಿ 69,053 ಜಗಳೂರು 40,192, ಹೊನ್ನಾಳಿ 39,024 ಮತ್ತು ನ್ಯಾಮತಿಯಲ್ಲಿ 22,334 ಸೇರಿದಂತೆ ಒಟ್ಟು 4,91,981 ಆರ್.ಆರ್ ಕುಟುಂಬಗಳಿಗೆ ಜಿಯೋಟ್ಯಾಗ್ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು. ... (ಬಾಕ್ಸ್) ಸಮೀಕ್ಷೆಗೆ ಮೊಬೈಲ್ ಆ್ಯಪ್ ಈ ಸಮೀಕ್ಷೆಯನ್ನು ಭೌತಿಕವಾಗಿ ಆಫ್‌ಲೈನ್ ಮತ್ತು ಆನ್ಲೈನ್ ಮೂಲಕ ನಡೆಸಲು ಮೊಬೈಲ್ ಆ್ಯಪ್ ಕೂಡ ಸಿದ್ಧಪಡಿಸಲಾಗಿದೆ. ತುಂಬಾ ಸುಲಭವಾಗಿದ್ದು, ಮೊಬೈಲ್ ಆ್ಯಪ್‌ನಲ್ಲಿಯೇ ಮಾಹಿತಿಯನ್ನು ಸಲ್ಲಿಸಬಹುದು. ಸರ್ವೇ ಮಾಡುವ ಸಂದರ್ಭದಲ್ಲಿ ಏನಾದರೂ ತಾಂತ್ರಿಕ ದೋಷ ಅಥವಾ ಸಮಸ್ಯೆಗಳು ಉಂಟಾದಲ್ಲಿ ಸ್ಥಳದಲ್ಲಿಯೇ ಪರಿಹರಿಸಲಾಗುವುದು ಎಂದು ಡಿಸಿ ತಿಳಿಸಿದರು. ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹಾಂತೇಶ್, ಪಾಲಿಕೆ ಆಯುಕ್ತೆ ರೇಣುಕಾ ಮತ್ತು ಡಿಡಿಪಿಐ ಕೊಟ್ರೇಶ್, ಹಿಂದುಳಿದ ವರ್ಗಗಳ ಅಧಿಕಾರಿ ರೇಣುಕಾದೇವಿ, ಬಿಇಒ ಉತ್ತರ ವಿಶಾಲಾಕ್ಷಿ, ಗಣತಿ ಸಿಬ್ಬಂದಿ ಭಾಗ್ಯಲಕ್ಷ್ಮಿ ಕೆ.ಆರ್. ಇದ್ದರು. ಚಿತ್ರ: ಡಿವಿಜಿ ಜಾತಿ ಗಣತಿ ದಾವಣಗೆರೆಯಲ್ಲಿ ಸೋಮವಾರ ಜಾತಿಗಣತಿ ಕಾರ್ಯಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಚಾಲನೆ ನೀಡಿದರು. ಸಂತೋಷ್ ಪಾಟೀಲ್, ಜಿ. ಕೊಟ್ರೇಶ್, ರೇಣುಕಾ, ರೇಣುಕಾದೇವಿ, ವಿಶಾಲಾಕ್ಷಿ ಇದ್ದರು. ...