ಜಾತಿ ಗಣತಿಗೆ ಜಿಲ್ಲಾಡಳಿತ ಸಜ್ಜು

dvg-dc-press-meet_20250918003421043.jpg
Published on

ದಾವಣಗೆರೆ  : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ. 22 ರಿಂದ ಅ. 7ರ ವರೆಗೆ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗೆ (ಜಾತಿ ಗಣತಿ) ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 3876 ಗಣತಿದಾರರು, 273 ಮೇಲ್ವಿಚಾರಕರು ಹಾಗೂ 98 ಜನ ಮಾಸ್ಟರ್ ಟ್ರೇನರ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಸ್ಟರ್ ಟ್ರೇನರ್‌ಗಳಿಗೆ ತರಬೇತಿ ನೀಡಲಾಗಿದೆ. 150 ಕುಟುಂಬಗಳಿಗೆ ಒಬ್ಬ ಗಣತಿದಾರ, 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ಸಮೀಕ್ಷಾ ಕಾರ್ಯ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.  ಗಣತಿದಾರರು ಮತ್ತು ಮೇಲ್ವಿಚಾರಕರಲ್ಲಿ 3299 ಪ್ರಾಥಮಿಕ ಶಿಕ್ಷಕರು ಹಾಗೂ 599 ಸಿಬ್ಬಂದಿಯನ್ನು ಇತರ ಇಲಾಖೆಯಿಂದ ಪಡೆಯಲಾಗಿದೆ. ಶೇ. 10 ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ಕಾಯ್ದಿರಿಸಲಾಗಿದೆ ಎಂದರು.  ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷಾ ಕಾರ್ಯದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ನಗರ ಪ್ರದೇಶಗಳಲ್ಲಿ ಪಿಯುಸಿ, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಅರಿವು ಮೂಡಿಸಲಿದ್ದಾರೆ. ಸಮೀಕ್ಷೆ ಆನ್‌ಲೈನ್‌ನಲ್ಲಿ ನಡೆಯಲಿದ್ದು ಅದಕ್ಕಾಗಿ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.  ಜಿಲ್ಲೆಯಲ್ಲಿ 5.42 ಲಕ್ಷ ಮನೆಗಳಿವೆ. 4.91 ಲಕ್ಷ ಮೀಟರ್‌ಗಳಿದ್ದು ಅವುಗಳಿಗೆ ಜಿಯೋಟ್ಯಾಗ್ ಮಾಡಲಾಗಿದೆ. ಸಮೀಕ್ಷೆ ವೇಳೆ ಸಾರ್ವಜನಿಕರು ಸಿಬ್ಬಂದಿಗೆ ಸಹಕಾರ ನೀಡಬೇಕು. ಸಮೀಕ್ಷೆಯ ನಂತರ ಸ್ವಯಂ ದೃಢೀಕರಣ ಪತ್ರವನ್ನು ಆಯಾ ಕುಟುಂಬದವರು ನೀಡಬೇಕು ಎಂದು ತಿಳಿಸಿದರು.  ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇಣುಕಾದೇವಿ ಇದ್ದರು.  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net