

ದಾವಣಗೆರೆ: ಕೇಂದ್ರ ಸರ್ಕಾರ 2020-21ನೇ ಸಾಲಿಗೆ ನಿಗದಿಪಡಿಸಿದ ಕಬ್ಬಿನ ಎಫ್‌ಆರ್‌ಪಿ(ನ್ಯಾಯಯುತ ಮತ್ತು ಲಾಭದಾಯಕ ಬೆಲೆ)ಯನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘಗಳು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿವೆ.
ಕ್ವಿಂಟಾಲ್‌ಗೆ 285 ರೂ. ನಿಗದಿಪಡಿಸಿದ ಬೆಲೆಯನ್ನು ಮರು ಪರಿಶೀಲನೆ ನಡೆಸಬೇಕು. ಕನಿಷ್ಠ 9.5 ಸಕ್ಕರೆ ಇಳುವರಿಯುಳ್ಳ ಕಬ್ಬಿಗೆ ಟನ್ ಒಂದಕ್ಕೆ 3500 ರೂ. ದರ ನಿಗದಿಪಡಿಸಬೇಕು. ಕೆಲವು ಕಾರ್ಖಾನೆಗಳು ಎಫ್‌ಆರ್‌ಪಿಗಿಂತಲೂ ಕಡಿಮೆ ದರ ನಿಗದಿಗೆ ಸಕ್ಕರೆಯ ಕಡಿಮೆ ಇಳುವರಿ ತೋರಿಸುತ್ತಿವೆ. ಸಕ್ಕರೆ ಇಳುವರಿ ಮತ್ತು ಕಬ್ಬಿನ ತೂಕ ಎರಡನ್ನೂ ರೈತರು ಗಮನಿಸುವ ಹಾಗೆ ಅವಕಾಶವಾಗಬೇಕು.
ಸಕ್ಕರೆ ಸಚಿವರು ಭರವಸೆ ನೀಡಿ 15 ದಿನ ಕಳೆದರೂ ರಾಜ್ಯ ಸಲಹಾ ಬೆಲೆ ತೀರ್ಮಾನ ಕುರಿತಂತೆ ಪೂರಕ ಬೆಳವಣಿಗೆಯಾಗಿಲ್ಲ. ಕೂಡಲೆ ಮುಖ್ಯಮಂತ್ರಿಗಳು ಸ್ಪಂದಿಸಬೇಕು. ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಮಧ್ಯೆ ವಿಪಕ್ಷೀಯ ಒಪ್ಪಂದ ಜಾರಿ ಮಾಡುವಂತೆ ಕಾರ್ಖಾನೆಗಳಿಗೆ ಸೂಚನೆ ನೀಡಬೇಕು.
ದಾವಣಗೆರೆ ಸೇರಿ ರಾಜ್ಯಾದ್ಯಂತ ಭತ್ತ- ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ಮಿತಿಯ ಮಾನದಂಡವನ್ನು ಬದಲಾಯಿಸಬೇಕು. ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಇದಕ್ಕಿಂತಲೂ ಕಡಿಮೆ ದರದ ಮಾರಾಟವಾಗದಂತೆ ಕಾನೂನು ರೂಪಿಸಬೇಕು.
ನಿರಂತರ ನೆರೆಹಾವಳಿಗೊಳಗಾದ ಗ್ರಾಮಗಳನ್ನು ಸ್ಥಳಾಂತರಿಸಿ, ಇದರ ಪುನರ್ ನಿರ್ಮಾಣದ ಜವಾಬ್ದಾರಿಯನ್ನು ಉದ್ಯಮಿಗಳಿಗೆ ನೀಡಿ ತೆರಿಗೆಯಲ್ಲಿ ಅವರಿಗೆ ರಿಯಾಯಿತಿ ನೀಡಬೇಕು. ಹೊನ್ನಾಳಿ ತಾಲೂಕಿನ ಹೊಳೆಅರಳಹಳ್ಳಿ, ಅರಬಘಟ್ಟ ಗ್ರಾಮಗಳಲ್ಲಿ ಕಳಪೆ ಮೆಕ್ಕೆಜೋಳ ಮತ್ತು ಕೊಕ್ಕನೂರು ಗ್ರಾಮಗಳಲ್ಲಿ ಕಳಪೆ ಭತ್ತದ ಬೀಜಗಳಿಂದ ರೈತರು ನಷ್ಟಕ್ಕೆ ಒಳಗಾಗಿದ್ದು, ಕಂಪನಿಗಳ ಮೂಲಕ ವೈಜ್ಞಾನಿಕ ನಷ್ಟ ಪರಿಹಾರ ನೀಡಬೇಕು.
ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರ ಆಸ್ತಿಯನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ಪಡೆದು, ಉತ್ಪಾದಿತ ಆದಾಯವನ್ನು ಸಂಬಂಧಿಸಿದ ವೃದ್ಧಾಶ್ರಮಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ತೇಜಸ್ವಿ ಪಟೇಲ್, ನಂದಿತಾವರೆ ಮುರುಗೇಂದ್ರಯ್ಯ, ಹೊನ್ನಾಳಿ ಎಸ್.ನಾಗರಾಜಪ್ಪ, ಪೂಜಾರ್ ಅಂಜಿನಪ್ಪ, ಅರಬಘಟ್ಟದ ಬಸಪ್ಪ ಎಸ್.ಮಾಸ್ತರ್ ಮತ್ತಿತರರಿದ್ದರು.