ಶೈಕ್ಷಣಿಕ ಪರೀಕ್ಷೆಗಳ ರದ್ದತಿಗಾಗಿ ಪ್ರತಿಭಟನೆ

DVG SFI JUL 8
Published on

ದಾವಣಗೆರೆ: ವಿದ್ಯಾರ್ಥಿಗಳು, ಶಿಕ್ಷಕರ ಆರೋಗ್ಯ ದೃಷ್ಟಿಯಿಂದ ಎಲ್ಲ ಶೈಕ್ಷಣಿಕ ಪರೀಕ್ಷೆಗಳ ರದ್ದತಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಕೋವಿಡ್-19 ನಿಂದಾಗಿ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಆರು ತಿಂಗಳ ಎಲ್ಲ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ಮಾಡಬೇಕು. ಬಾಡಿಗೆ ಇರುವ ವಿದ್ಯಾರ್ಥಿಗಳ ಪರವಾಗಿ ಸರ್ಕಾರವೇ ಬಾಡಿಗೆ ಪಾವತಿಸಬೇಕು.

ಹನ್ನೆರಡನೇ ತರಗತಿವರೆಗೆ ಮಧ್ಯಾಹ್ನದ ಊಟ ನೀಡಬೇಕು. ಲಾಕ್‌ಡೌನ್ ಸಮಯದಲ್ಲಿ 6 ತಿಂಗಳು ವಿದ್ಯಾರ್ಥಿಗಳ ಕುಟುಂಬಗಳಿಗೆ 7500 ರೂ. ನೀಡಬೇಕು. ಆನ್‌ಲೈನ್ ಶಿಕ್ಷಣ ರದ್ದುಗೊಳಿಸಬೇಕು. ಆನ್‌ಲೈನ್ ಶಿಕ್ಷಣಕ್ಕೆ ಶುಲ್ಕ ವಸೂಲಿ ಮಾಡಿರುವ ವಿದ್ಯಾಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ತಳ ಸಮುದಾಯಗಳ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡುವ ವ್ಯವಸ್ಥೆ ಮಾಡಬೇಕು. ಅತಿಥಿ ಶಿಕ್ಷಕರು, ಉಪನ್ಯಾಸಕರು, ಕಾರ್ಮಿಕರ ಬಾಕಿ ವೇತನಗಳನ್ನು ಶೀಘ್ರವಾಗಿ ಪಾವತಿಸಬೇಕು. ಖಾಸಗಿ ಶಾಲಾ ಕಾಲೇಜುಗಳು, ಮೊರಾರ್ಜಿ ವಸತಿ ಶಿಕ್ಷಣ ಸಂಸ್ಥೆಗಳ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಪ್ರತಿ ತಿಂಗಳು 7500 ರೂ. ಕೊಡಬೇಕು. ಗ್ರಾಮೀಣ ಪ್ರದೇಶಗಳ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸ್ಥಳಾಂತರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಲಕ್ಷ್ಮಣ್ ರಾಮಾವತ್, ಮುಖಂಡರಾದ ಐ.ರಾಕೇಶ್, ಸಲ್ಲಾವುದ್ದೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net