ರಸ್ತೆಯಲ್ಲಿ ಹಂಪ್ಸ್, ಬಸ್ ತಂಗುದಾಣ ನಿರ್ಮಾಣಕ್ಕೆ ಆಗ್ರಹ

dvg-students-protest-13.jpg
Published on

ವಿಜಯವಾಣಿ ಸುದ್ದಿಜಾಲ ದಾವಣಗೆರೆ
 ನಗರದ ಬಾತಿ ಕೆರೆ ಬಳಿಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಮುಂದಿರುವ ಪಿಬಿ ರಸ್ತೆಯಲ್ಲಿ ಹಂಪ್ಸ್ ಅಳವಡಿಸಿ ಬಸ್ ತಂಗುದಾಣ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಎಐವೈಎಫ್ ಸಂಘಟನೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
 ರಸ್ತೆ ಅಪಘಾತದಲ್ಲಿ ಬುಧವಾರ ಸಂಜೆ ಮೃತಪಟ್ಟ ಅದೇ ಕಾಲೇಜಿನ ವಿದ್ಯಾರ್ಥಿ ಮನೋಜ್ ಕುಮಾರ್ ಭಾವಚಿತ್ರವಿರುವ ಫ್ಲೆಕ್ಸ್ ಹಿಡಿದು ಪ್ರತಿಭಟನೆ ನಡೆಸಿದರು.
 ಕಾಲೇಜು ಮುಂದಿರುವ ರಸ್ತೆಯಲ್ಲಿ ಹಂಪ್ಸ್ ಇಲ್ಲ. ಈ ರಸ್ತೆಯಲ್ಲಿ ಪ್ರಸ್ತುತ ವರ್ಷ ಹಲವು ರಸ್ತೆ ಅಪಘಾತಗಳು ಸಂಭವಿಸಿವೆ. ಹಂಪ್ಸ್ ಇಲ್ಲದ ಕಾರಣ ವಾಹನಗಳು ಅತಿ ವೇಗದಲ್ಲಿ ಚಲಿಸುತ್ತವೆ. ಇದರಿಂದ ರೋಗಿಗಳು, ವಿದ್ಯಾರ್ಥಿಗಳು, ಸಿಬ್ಬಂದಿ ಸಂಚರಿಸಲು ತೊಂದರೆಯಾಗಿದೆ ಎಂದು ತಿಳಿಸಿದರು.
 ಕಾಲೇಜು ಆಸ್ಪತ್ರೆಗೆ ಬರುವ ರೋಗಿಗಳು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನಗರ ಸಾರಿಗೆ ಬಸ್ಸುಗಳಲ್ಲೇ ಹೋಗುವುದರಿಂದ ಅವರಿಗೆ ಬಸ್ ತಂಗುದಾಣ ಅಗತ್ಯವಾಗಿ ಬೇಕಿದೆ ಎಂದು ಹೇಳಿದರು.
 ಇತ್ತೀಚೆಗೆ ಸಮೀಪದ ಕಾಲೇಜು ವಿದ್ಯಾರ್ಥಿಗಳು, ಶೋರೂಂ ಸಿಬ್ಬಂದಿ, ಆಸ್ಪತ್ರೆಗೆ ಬರುವ ರೋಗಿಗಳು ಅಪಘಾತಕ್ಕೆ ಒಳಗಾಗಿದ್ದಾರೆ. ಕಳೆದ ತಿಂಗಳು ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಡಾ.ಕಿರಣ್, ಬುಧವಾರ ಬಿ.ಎ.ಎಂ.ಎಸ್ ವಿದ್ಯಾರ್ಥಿ ಮನೋಜ್ ಕುಮಾರ್ ಇದೇ ಕಾಲೇಜಿನ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
 ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು, ವಕೀಲ ಎಸ್. ಪರಮೇಶ್ವರ್, ಸಿ. ಗುರುಮೂರ್ತಿ, ಕಾಲೇಜು ಪ್ರಾಚಾರ್ಯ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net