ಪಾಠ ಮನದಟ್ಟಾದರೆ ಇಲ್ಲ ಪರೀಕ್ಷಾ ಭಯ

dvg-students-welcome-29.jpg
Published on

ದಾವಣಗೆರೆ :  ಶಾಲಾ ಕಾಲೇಜು ವಿದ್ಯಾರ್ಥಿಗಳು ಅಂದಂದಿನ ಪಾಠಗಳನ್ನು ಅಂದೇ ಅರ್ಥ ಮಾಡಿಕೊಂಡಲ್ಲಿ ವಿಷಯ ಮನದಟ್ಟಾಗುವುದಷ್ಟೇ ಅಲ್ಲದೆ ಪರೀಕ್ಷಾ ಭಯವೂ ಇರುವುದಿಲ್ಲ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಕಿವಿಮಾತು ಹೇಳಿದರು.  ನಗರದ ಬಾಡ ಕ್ರಾಸ್‌ನಲ್ಲಿರುವ ಜೈನ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಯಾವ ಪಠ್ಯಗಳೂ ಆಯಾ ತರಗತಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಮೀರಿ ರಚನೆಯಾಗಿರುವುದಿಲ್ಲ. ಆದರೂ ಅರ್ಥವಾಗುವುದಿಲ್ಲ ಎಂಬುದಕ್ಕೆ ನಿರಾಸಕ್ತಿಯೇ ಕಾರಣ. ಇದು ಮುಂದೆ ಪರೀಕ್ಷಾ ಭಯವನ್ನು ತಂದೊಡ್ಡುತ್ತದೆ. ಆದ್ದರಿಂದ ಅಂದಂದಿನ ಪಾಠಗಳನ್ನು ಅಂದಂದೇ ಅರ್ಥ ಮಾಡಿಕೊಂಡು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಉದಾಹರಣೆಗಳ ಸಹಿತ ವಿವರಿಸಿದರು.  ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು ಸ್ವಾಗತಿಸಿ ಮಾರ್ಗದರ್ಶಿಸುವುದು ನಮ್ಮ ಸನಾತನ ಗುರುಕುಲ ಪದ್ಧತಿಯಿಂದಲೂ ನಡೆದು ಬಂದ ಸತ್ಸಂಪ್ರದಾಯವಾಗಿದೆ. ಈ ಕಾಲೇಜಿನಲ್ಲೂ ಅದನ್ನು ಪಾಲಿಸುತ್ತಿರುವುದು ಯೋಗ್ಯವಾಗಿದೆ ಎಂದರು.  ಜೈನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಚಲ್ ಚಂದ್ ಜೈನ್ ಮಾತನಾಡಿ, ಭಾರತವು ಜ್ಞಾನದ ನಿಧಿಯಾಗಿದೆ. ವಿದ್ಯಾರ್ಥಿಗಳು ಗುಂಪು ಚರ್ಚೆಯ ಮೂಲಕ ಪಠ್ಯ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ ಮಾರ್ಗ ಎಂದು ಸಲಹೆ ನೀಡಿದರು.  ಕಾಲೇಜಿನ ಪ್ರಾಚಾರ್ಯ ಕೆ.ಎಸ್. ರಘು ಅಧ್ಯಕ್ಷೀಯ ನುಡಿಗಳನ್ನಾಡಿದರು. ಅಧ್ಯಾಪಕಿಯರಾದ ಶ್ವೇತಾ ಹಾಗೂ ಪಾವನಾ ಅತಿಥಿಗಳ ಪರಿಚಯ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net