

ದಾವಣಗೆರೆ : ಆಗಸದಲ್ಲಿ ಒಮ್ಮೆ ಬಿಸಿಲು, ಮತೊಮ್ಮೆ ಮೋಡಗಳ ಆಟ. ನಗರದ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಆವರಣದಲ್ಲಿ ಸೇರಿದ್ದ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಯೋಗ ಪ್ರದರ್ಶನಕ್ಕೆ ಅದ್ಯಾವುದೂ ಅಡ್ಡಿಯೇ ಆಗಲಿಲ್ಲ. ಸಮವಸ್ತ್ರ ಧರಿಸಿ, ಮ್ಯಾಟ್‌ನೊಂದಿಗೆ ಬಂದಿದ್ದ ಆ ಮಕ್ಕಳು ಶಿಕ್ಷಕಿ ಬಿ.ಎಚ್. ಗೀತಾ ಮಾರ್ಗದರ್ಶನದಲ್ಲಿ ನಿರಂತರ 40 ನಿಮಿಷಗಳ ಕಾಲ ಯೋಗದ ಚಮತ್ಕಾರ ತೋರಿದರು. ಚಿನ್ಮುದ್ರೆ ಸ್ಥಿತಿಯಲ್ಲಿ ಕುಳಿತು ಯೋಗ ಪ್ರದರ್ಶನ ಆರಂಭಿಸಿದ ವಿದ್ಯಾರ್ಥಿಗಳು ಓಂಕಾರ ಮಂತ್ರ, ಪತಂಜಲಿ ಮಂತ್ರವನ್ನು ಪಠಿಸಿದರು. ಸೂರ್ಯ ನಮಸ್ಕಾರದಿಂದ ಶುರು ಮಾಡಿ, ಊರ್ಧ್ವಾಸನ, ಅಶ್ವ ಸಂಚಲನಾಸನ, ಚತುರಂಗ ದಂಡಾಸನ, ಅಷ್ಟಾಂಗ ನಮಸ್ಕಾರ, ಭುಜಂಗಾಸನ, ಪರ್ವತಾಸನ, ಹಸ್ತ ಪಾದಾಸನ, ನಮಸ್ಕಾರಾಸನ ಹೀಗೆ ವಿವಿಧ ಬಗೆಯ ಆಸನಗಳ ಸೌಂದರ್ಯ ನೋಡಲು ದೊರೆಯಿತು.