ಸ್ವ ಸಾಮರ್ಥ್ಯದ ಅರಿವು ಸಾಧನೆಗೆ ಪ್ರೇರಣೆ

DVG-AGB-10.jpg
Published on

ದಾವಣಗೆರೆ : ದೇಶದ ಯುವಶಕ್ತಿಯು ಜಾಗತಿಕ ಮಟ್ಟದ ಸಾಧನೆಗೆ ಸ್ವ ಸಾಮರ್ಥ್ಯದ ಅರಿವು ಮಾಡಿಕೊಳ್ಳಬೇಕಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್. ಮಂಜುನಾಥ ಹೇಳಿದರು.  ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಅಜ್ಜಂಪುರ ಗೋವಿಂದಸ್ವಾಮಿ ಭಾಗ್ಯಲಕ್ಷ್ಮಮ್ಮ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.  ನಾಯಕತ್ವ ಗುಣ ಎಂದರೆ ಇತರರ ಮೇಲೆ ದರ್ಪ ತೋರಿಸುವುದಲ್ಲ, ಎಲ್ಲರ ಅಭಿಪ್ರಾಯಗಳಿಗೆ ಅವಕಾಶ ನೀಡಿ ಯೋಗ್ಯವಾದದನ್ನು ವಿಧಾಯಕ ಕಾರ್ಯಗಳಿಗೆ ಅಳವಡಿಸುವುದಾಗಿದೆ. ಉತ್ತಮ ನಾಯಕ ಎನಿಸಿಕೊಳ್ಳಲು ಉತ್ತಮರೊಂದಿಗೆ ಸ್ನೇಹ ಅವಶ್ಯ ಎಂದು ತಿಳಿಸಿದರು.  ಪಿಯುಸಿ ಅವಧಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರ್ವಕಾಲ, ದೇಶದಲ್ಲಿ ವಾರ್ಷಿಕ ಸುಮಾರು ಒಂದೂವರೆ ಕೋಟಿ ವಿದ್ಯಾರ್ಥಿಗಳು ಹಾಗೂ ರಾಜ್ಯದಲ್ಲಿ 6.98 ಲಕ್ಷ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಎದುರಿಸುತ್ತಾರೆ. ಪದವಿಯ ನಂತರ ಉದ್ಯೋಗ ಅರಸುವುದಕ್ಕಿಂತ ಉದ್ಯೋಗದಾತರಾಗುವುದು ವೈಯಕ್ತಿಕ ಮತ್ತು ರಾಷ್ಟ್ರದ ಭವಿಷ್ಯಕ್ಕೆ ಉತ್ತಮ ಎಂದರು.                            ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ವಜ್ರ ಮಹೋತ್ಸವ ವಿದ್ಯಾಪೀಠ ಹಾಗೂ ಕಾಲೇಜಿನ ಉಪಾಧ್ಯಕ್ಷ ಆರ್.ಎಲ್. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಕಾಸಲ್ ಎಸ್. ಸತೀಶ್, ಆರ್.ಜಿ. ನಾಗೇಂದ್ರ ಪ್ರಸಾದ್, ಜೆ.ವಿ. ಗೋಪಾಲಕೃಷ್ಣ ಶ್ರೇಷ್ಟಿ,  ಡಾ. ಬಿ.ಪಿ. ಕುಮಾರ್, ಆರ್.ಸಿ. ಹಾಲಪ್ಪ ಶೆಟ್ಟಿ, ಪ್ರಾಚಾರ್ಯ ಎಸ್. ಪ್ರದೀಪ್‌ಕುಮಾರ್  ಇತರರು ಇದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.  ಅಧ್ಯಾಪಕರಾದ ಸಂಗೀತಾ, ಉಷಾ, ಪ್ರಸನ್ನ ನಿರೂಪಿದರೆ, ಮಂಜುನಾಥ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net