

ದಾವಣಗೆರೆ : ಯುವ ವಿದ್ಯಾರ್ಥಿಗಳು ನಮ್ಮ ಪರಂಪರೆಯ ಮೌಲ್ಯಗಳ ಅರಿವು ಬೆಳೆಸಿಕೊಂಡರೆ ಅವರಿಂದ ಸಮಾಜಮುಖಿಯಾದ ಉತ್ತಮ ಕಾರ್ಯಗಳನ್ನು ನಿರೀಕ್ಷಿಸಬಹುದು ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ ಅಭಿಪ್ರಾಯ ಪಟ್ಟರು. ನಗರದ ಜಿ. ಮಲ್ಲಿಕಾರ್ಜುನಪ್ಪ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಂಗಳವಾರ ವಿಜ್ಞಾನ ಪದವಿಯ ನೂತನ ವಿದ್ಯಾರ್ಥಿಗಳ ‘ಪೀಠಿಕಾ’ (ಇಂಡಕ್ಷನ್) ಕಾರ್ಯಕ್ರಮದಲ್ಲಿ ‘ಭಾರತೀಯ ಪರಂಪರೆ ಹಾಗೂ ಸಂಸ್ಕೃತಿ’ ಕುರಿತು ಮಾತನಾಡಿದರು. ಅತಿಥಿ ಅಭ್ಯಾಗತರನ್ನು ಆದರಿಸುವುದರಿಂದ ಮೊದಲುಗೊಂಡು ಎಲ್ಲ ಸದಾಚಾರಗಳೂ ನಮ್ಮ ದೇಶದಲ್ಲಿ ಎಲ್ಲ ಮತೀಯರಲ್ಲೂ ಪರಂಪರೆಯಾಗಿ ಮುಂದುವರಿದಿವೆ. ಕಾಲ ಕಾಲಕ್ಕೆ ಇದನ್ನು ಸುಧಾರಿಸಿಕೊಳ್ಳುತ್ತ ಮತ್ತಷ್ಟು ಸಮಾಜ ಮುಖಿಯಾಗಿಸುವುದೇ ಸಂಸ್ಕೃತಿಯಾಗಿದೆ ಎಂದು ತಿಳಿಸಿದರು. ಈ ಮೌಲ್ಯಗಳನ್ನು ವಿಶ್ವದ ಬೇರೆ ಯಾವುದೇ ರಾಷ್ಟ್ರಗಳಲ್ಲೂ ನಿರೀಕ್ಷಿಸಲಾಗದು. ಪರಿಸರ ಹಾಗೂ ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿ ಬದುಕುವುದು ನಮ್ಮ ಪರಂಪರೆಯಾಗಿದೆ. ಇದರ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರೆ ಮತೀಯ ಸಾಮರಸ್ಯ ಹಾಗೂ ಏಕತೆ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು. ಅಧ್ಯಾಪಕರಾದ ಓಂಕಾರಪ್ಪ, ವೀರೇಶ್ ಶರ್ಮಾ, ಸಿ.ಎನ್. ರೇಖಾ, ಸವಿತಾ, ಸಂತೋಷ್ ಇದ್ದರು. ಅಧ್ಯಾಪಕಿ ಡಾ.ಅರುಣಾ ಚರಂತಿಮಠ ನಿರೂಪಿಸಿದರು.