

ದಾವಣಗೆರೆ : ಸಂಶೋಧನಾ ಅಧ್ಯಯನಕ್ಕಾಗಿ ತೈವಾನ್‌ಗೆ
ದಾವಿವಿ ಮೂವರು ವಿದ್ಯಾರ್ಥಿಗಳ ಪ್ರವಾಸ
ವಿಜಯವಾಣಿ ಸುದ್ದಿಜಾಲ ದಾವಣಗೆರೆ
ಸಂಶೋಧನೆ ಮತ್ತು ಉನ್ನತ ಅಧ್ಯಯನಕ್ಕಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಮೂವರು ಸಂಶೋಧನಾ ವಿದ್ಯಾರ್ಥಿಗಳು ಸೆ. 17ರಂದು ತೈವಾನ್ ದೇಶಕ್ಕೆ ತೆರಳಲಿದ್ದಾರೆ.
ಪ್ರೊ.ಯು.ಎಸ್. ಮಹಾಬಲೇಶ್ವರ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಸಂಶೋಧನೆ ಕೈಗೊಂಡಿರುವ ಜಿ.ಪಿ. ವನಿತಾ, ಆರ್. ಮಹೇಶ ಮತ್ತು ಟಿ. ಮಾರಣ್ಣ ಅವರು ಅಧ್ಯಯನ, ಸಂಶೋಧನೆಗೆ ಅವಕಾಶ ಪಡೆದಿದ್ದಾರೆ.
ತೈವಾನ್ ಸರ್ಕಾರದ ಅನುಭವ ಆಧಾರಿತ ಶಿಕ್ಷಣ ಯೋಜನೆಯಡಿ ಆಯ್ಕೆಯಾಗಿರುವ ದಾವಣಗೆರೆ ವಿವಿ ಗಣಿತಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ತೈವಾನ್‌ನ ತಾಂಗೈ ವಿವಿ ಸಹಭಾಗಿತ್ವದಲ್ಲಿ ಮೂರು ತಿಂಗಳ ಕಾಲ ದ್ರವ ಚಲನಶಾಸ್ತ್ರ ವಿಷಯದಲ್ಲಿ ಸಂಶೋಧನಾ ಅಧ್ಯಯನ, ಪ್ರಾಯೋಗಿಕ ಅನುಭವ, ಸಂಶೋಧನಾ ವಿನಿಮಯ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.
ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಅವರು ಅಧ್ಯಯನಕ್ಕೆ ತೈವಾನ್‌ಗೆ ತೆರಳುತ್ತಿರುವ ವಿದ್ಯಾರ್ಥಿಗಳನ್ನು ಗುರುವಾರ ಗೌರವಿಸಿ ಮಾತನಾಡಿ, ಹೊರದೇಶದ ವಿವಿಗಳಿಗೆ ಅಧ್ಯಯನಕ್ಕೆ ತೆರಳುವ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಸಂಶೋಧನಾತ್ಮಕವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ಜತೆಗೆ ಸಂಶೋಧನೆಗೆ ಪೂರಕವಾದ ಹೊಸ ವಿಷಯಗಳ ಅಧ್ಯಯನ ಮಾಡುವುದು ಮುಖ್ಯ ಎಂದರು.
ನೈತಿಕ ಪ್ರಜ್ಞೆ, ಮಾನವೀಯ ಮೌಲ್ಯಗಳೊಂದಿಗೆ ಸೌಜನ್ಯಯುತವಾಗಿ ಕೆಲಸ ನಿರ್ವಹಿಸಿ, ವಿಶ್ವವಿದ್ಯಾನಿಲಯ ಮತ್ತು ದೇಶಕ್ಕೆ ಗೌರವ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಂಶೋಧನಾ ಮಾರ್ಗದರ್ಶಕ ಪ್ರೊ.ಯು.ಎಸ್.ಮಹಾಬಲೇಶ್ವರ ಇದ್ದರು.