ಜಂಟಿ ಕಾರ್ಮಿಕ ಹೋರಾಟದ ತುರ್ತು ಅಗತ್ಯ

dvg-ubdt_20250705001231648.jpg
Published on

ದಾವಣಗೆರೆ  : ಕಾರ್ಮಿಕ ವಿರೋಧಿ ಬಂಡವಾಳಶಾಹಿ ನೀತಿಗಳನ್ನು ಸೋಲಿಸಲು ಪ್ರಬಲ ಜಂಟಿ ಕಾರ್ಮಿಕ ಹೋರಾಟದ ತುರ್ತು ಅವಶ್ಯಕತೆ ಇದೆ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ ಹೇಳಿದರು.  ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಜುಲೈ 9 ರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ, ಎಐಯುಟಿಯುಸಿ ಗೆ ಸಂಯೋಜಿತ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜು ‘ಸಿ’ ಮತ್ತು ‘ಡಿ’ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘದಿಂದ ಕಾಲೇಜು ಆವರಣದಲ್ಲಿ ಶುಕ್ರವಾರ ಪೋಸ್ಟರ್ ಬಿಡುಗಡೆ ಹಾಗೂ ಪ್ರಚಾರ ಸಭೆಯಲ್ಲಿ ಮಾತನಾಡಿದರು.  ಕಾರ್ಪೊರೇಟ್ಗಳ ಹಿತಾಸಕ್ತಿ ಕಾಪಾಡುವುದು ಹಾಗೂ ದುಡಿಯುವ ಜನರ ಮೇಲೆ ಗುಲಾಮಗಿರಿ ಷರತ್ತುಗಳನ್ನು ಹೇರುವ ಉದ್ದೇಶದಿಂದ ಅದಕ್ಕೆ ಬೇಕಾಗಿರುವ ಸಮಗ್ರ ನೀಲನಕ್ಷೆ ರೂಪಿಸಿ ಸರ್ಕಾರ ಮುಂದಡಿ ಇಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.  ಅವಿರತ ತ್ಯಾಗ, ಬಲಿದಾನಗಳಿಂದ ಗಳಿಸಿದ 29 ಕಾರ್ಮಿಕ ಕಾನೂನುಗಳನ್ನು ಹರಣಗೊಳಿಸಿ 4 ಕಾರ್ಮಿಕ ಸಂಹಿತೆ (ಲೇಬರ್ ಕೋಡ್) ಜಾರಿಗೊಳಿಸಲು ಸರ್ಕಾರವು ತುದಿಗಾಲಿನಲ್ಲಿ ನಿಂತಿದೆ. ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಕಡಿತಗೊಳಿಸಿ ಕಾಯಂ ಉದ್ಯೋಗಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.  ಗುತ್ತಿಗೆ, ಹೊರಗುತ್ತಿಗೆ, ಹೊಸದಾಗಿ ಜಾರಿಗೊಳಿಸಲಾಗುವ ನಿಗದಿತ ಅವಧಿ ಉದ್ಯೋಗ ಇತ್ಯಾದಿಗಳು ಆಳುವ ಬಂಡವಾಳಶಾಹಿ ವರ್ಗ ಮತ್ತು ಅದರ ಅಧೀನ ಸರ್ಕಾರಗಳು ತಮ್ಮ ಇಚ್ಛೆಯಂತೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮತ್ತು ವಜಾ ಮಾಡಲು ಕೈಗೊಂಡ ಕರಾಳ ವಿನ್ಯಾಸವಾಗಿದೆ ಎಂದು ಹೇಳಿದರು.  ಕಾರ್ಮಿಕ ಸಂಹಿತೆಗಳನ್ನು ಸೋಲಿಸಲು ಮತ್ತು ರದ್ದುಗೊಳಿಸಲು ಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಪ್ರಬಲವಾದ ಹೋರಾಟವನ್ನು ಸಂಘಟಿಸುವ ಉದ್ದೇಶದಿಂದ ಜುಲೈ 9ರ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.  ಸಂಘಟನೆಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಅಣಬೇರು, ವಿರೂಪಾಕ್ಷಪ್ಪ ದೊಡ್ಡಮನಿ, ಪರಮೇಶ್ವರಪ್ಪ, ಕರಿಬಸಪ್ಪ, ರವಿಕುಮಾರ್, ಬಸವರಾಜ್ ಶ್ಯಾವಿ, ಮರುಳಸಿದ್ದಪ್ಪ, ಗಂಗಮ್ಮ, ಲತಾ, ಮಲ್ಲಣ್ಣ, ಬಸವರಾಜ್, ವಿಜಯ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net