ಎಸ್‌ಎಸ್‌ಎಲ್‌ಸಿ ಫಲಿತಾಂಶ ಪುನಶ್ಚೇತನ ಶಿಬಿರ 22ಕ್ಕೆ

IMG-20250219-WA0022.jpg
Published on

ದಾವಣಗೆರೆ : ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಿಕ್ಷಣ ಸಮಿತಿ ಮತ್ತು ಚಂದ್ರಗುಪ್ತ ಮೌರ್ಯ ವಿದ್ಯಾಸಂಸ್ಥೆಗಳ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಫಲಿತಾಂಶ ಪುನಶ್ಚೇತನ ಶಿಬಿರವನ್ನು ಹರಿಹರ ತಾಲೂಕು ಬೆಳ್ಳೂಡಿಯ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಫೆ. 22 ರಂದು ಹಮ್ಮಿಕೊಳ್ಳಲಾಗಿದೆ.  ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಟ್ರಸ್ಟಿ ಮತ್ತು ಕಾರ್ಯದರ್ಶಿ ಮಾಗೋದಿ ಮಂಜುನಾಥ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ವಿವಿಧ ಶಾಲೆಗಳಿಂದ 2 ಸಾವಿರ ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.  ಶಿಬಿರದ ಅಂಗವಾಗಿ ಅಂದು ಬೆಳಗ್ಗೆ 10 ರಿಂದ 11 ಗಂಟೆಯ ವರೆಗೆ ಪ್ರತಿಭಾ ಸ್ಪರ್ಧಾ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ವಿಜೇತರಾದ ಮಕ್ಕಳಿಗೆ 25 ಸಾವಿರ ರೂ (ಪ್ರಥಮ), 15 ಸಾವಿರ ರೂ. (ದ್ವಿತೀಯ), 10 ಸಾವಿರ ರೂ. (ತೃತೀಯ) ಬಹುಮಾನ ನೀಡಲಾಗುವುದು ಎಂದು ಹೇಳಿದರು.  ಎಸ್‌ಎಸ್‌ಎಲ್‌ಸಿ ಪರೀಕ್ಷೆ-ಅಂತಿಮ ಹಂತದ ಸಿದ್ಧತೆ : ‘ನೂರಕ್ಕೆ ನೂರು ಅಂಕ ಗಳಿಸುವುದು ಹೇಗೆ’ ಎಂಬ ವಿಷಯವಾಗಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2ರ ವರೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಗುವುದು.  ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ತರಗತಿಗಳನ್ನು ನಡೆಸಲಾಗುವುದು. ಪರೀಕ್ಷೆ ಕೌಶಲಗಳು, ಸಮಯ ಹೊಂದಾಣಿಕೆ, ಗ್ರಹಿಕೆ ಉತ್ತರಗಳ ನಿರ್ದಿಷ್ಟತೆ ಮುಂತಾದ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡುವರು ಎಂದರು.  ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ರ ವರೆಗೆ ಎಸ್‌ಎಸ್‌ಎಲ್‌ಸಿ ನಂತರದ ಶೈಕ್ಷಣಿಕ ಅವಕಾಶಗಳು ಮತ್ತು ಕರಿಯರ್ ಗೈಡೆನ್ಸ್ ಕಾರ್ಯಕ್ರಮ ನಡೆಯಲಿದೆ. ವೃತ್ತಿಪರ ಕೋರ್ಸ್‌ಗಳು, ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ತಜ್ಞರು ತಿಳಿಸಿಕೊಡುವರು ಎಂದು ಹೇಳಿದರು.  ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಿಕ್ಷಣ ಸಮಿತಿಯ ಟ್ರಸ್ಟಿ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸುಧಾರಣೆಗೂ ಇದರಿಂದ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಸಮಿತಿಯ ಕಾರ್ಯದರ್ಶಿ ನಿಂಗಪ್ಪ, ಶೈಕ್ಷಣಿಕ ನಿರ್ದೇಶಕಿ ಶೃತಿ ಇನಾಮದಾರ್ ಇದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net